ಸಂಸ್ಕಾರ ಅಳವಡಿಸಿಕೊಳ್ಳುವ ವ್ಯಕ್ತಿಗಳು ದೇಶದ ಸಂಪನ್ಮೂಲ ವ್ಯಕ್ತಿಗಳಾಗುತ್ತಾರೆ

| Published : Jan 17 2024, 01:51 AM IST

ಸಂಸ್ಕಾರ ಅಳವಡಿಸಿಕೊಳ್ಳುವ ವ್ಯಕ್ತಿಗಳು ದೇಶದ ಸಂಪನ್ಮೂಲ ವ್ಯಕ್ತಿಗಳಾಗುತ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಯು ದೇಶಕ್ಕೆ ಸಂಪನ್ಮೂಲ ವ್ಯಕ್ತಿಗಳಾಗುತ್ತಾರೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಗಜೇಂದ್ರಗಡ: ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಯು ದೇಶಕ್ಕೆ ಸಂಪನ್ಮೂಲ ವ್ಯಕ್ತಿಗಳಾಗುತ್ತಾರೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.ಸ್ಥಳೀಯ ರೋಣ ರಸ್ತೆಯ ಅನ್ನದಾನೇಶ್ವರ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ೨೦೨೩-೨೪ನೇ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಖಿನ್ನತೆಗೆ ಒಳಗಾಗಿ ವಿದ್ಯಾರ್ಥಿಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಂಯಮ ಹಾಗೂ ಶಿಸ್ತು ಮತ್ತು ಜೀವನದ ಮಹತ್ವ ತಿಳಿಸಿಕೊಡುವ ಕಾರ್ಯದ ಜತೆಗೆ ಸರಿಯಾದ ಹಾಗೂ ಉತ್ತಮವಾದ ಆಯ್ಕೆಗಳನ್ನು ಹೊಂದಲು ಮನೋಸ್ಥೈರ್ಯ ತುಂಬುವ ಅವಶ್ಯಕತೆಯಿದೆ ಎಂದ ಅವರು, ಎಷ್ಟು ಸಾಧ್ಯವೋ ಅಷ್ಟು ನಗುವಿನ ಜೀವನ ಕಳೆಯಲು ಪ್ರಯತ್ನಿಸಬೇಕು. ಆದರೆ ನಮ್ಮ ನಗು ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಾರದು ಎಂದರು.

ಅಂಧ ಸ್ಕೇಟಿಂಗ್ ಕ್ರೀಡಾಪಟು ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳ ಭಾಷಣಕಾರರಾದ ಡಾ. ನಾನು ಪಾಟೀಲ ಮಾತನಾಡಿ, ಬದುಕಿನ ಸಾವಿರಾರು ಕನಸುಗಳಿಗೆ ದಾರಿಯನ್ನು ಕಂಡುಕೊಳ್ಳಲು ಸಿಗುವ ಮಾರ್ಗದರ್ಶನ ವಿದ್ಯಾರ್ಥಿಯ ಜೀವನದ ಅತ್ಯಂತ ಪವಿತ್ರವಾದ ಘಟ್ಟವಾಗಿದೆ. ಹೀಗಾಗಿ ನಾವು ಸಮಯವನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೇವೋ ಹಾಗೆ ನಾವು ಸಾಧನೆಗೆ ಬಳಕೆಯಾಗುತ್ತೇವೆ. ಆದ್ದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಸಿಗುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಜಗತ್ತೇ ತಿರುಗಿ ನೋಡುವಂತೆ ಸಾಧನೆ ಮಾಡಬೇಕು ಎಂದರು.

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ನರೇಗಲ್ ಪಟ್ಟಣದಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಜೋಳಗಿ ಹಾಕಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಕಾರಣ ಉತ್ತರ ಕರ್ನಾಟಕದಾದ್ಯಂತ ಅಕ್ಷರ ಪಡೆದ ಶಿಕ್ಷಿತರು ಹುಟ್ಟಿಕೊಂಡರು. ಶ್ರೀಗಳ ಮಾರ್ಗದರ್ಶನದಂತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪಾಠಪ್ರವಚನದ ಜೊತೆಯಲ್ಲಿ ಸಂಸ್ಕಾರ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ ಎಂದರು.

ಪಿಯು ಕಾಲೇಜಿನ ಚೇಮರನ್ನ ವಿ.ವಿ. ವಸ್ತ್ರದ ಮಾತನಾಡಿದರು. ಕಳೆದ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಈ ವೇಳೆ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಿವುಡ ಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷ ಶರಣಪ್ಪ ರೇವಡಿ, ಎಸ್.ಎಸ್. ಪಟ್ಟೇದ, ಸದಾಶಿವ ಕರಡಿ, ಮುದಕಪ್ಪ ತೊಂಡಿಹಾಳ, ಚಂಬಣ್ಣ ಚವಡಿ, ಪಿ.ಎನ್. ಚವಡಿ, ಎಸ್.ಸಿ. ಚಕ್ಕಡಿಮಠ, ಪ್ರಾಚಾರ್ಯರಾದ ಅಮರೇಶ ಗಾಣಿಗೇರ, ವಸಂತರಾವ್ ಗಾರಗಿ ಸೇರಿ ಇತರರು ಇದ್ದರು.