ಬಿಸಿಲಿಗೆ ಬೇಸತ್ತ ಜನರು: ತಂಪು ಪಾನೀಯಗಳ ಮೊರೆ

| Published : Mar 28 2024, 12:46 AM IST

ಸಾರಾಂಶ

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಜನರು ತಂಪು ಪಾನೀಯ, ಎಳ ನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ.

ಕಲ್ಲಂಗಡಿ ಹಣ್ಣು, ಎಳ ನೀರು, ಕಬ್ಬಿನ ಹಾಲಿಗೆ ಹೆಚ್ಚಿದ ಬೇಡಿಕೆಏಕನಾಥ ಜಿ ಮೆದಿಕೇರಿ

ಕನ್ನಡಪ್ರಭ ವಾರ್ತೆ ಹನುಮಸಾಗರ

ಬೇಸಿಗೆ ಪ್ರಾರಂಭವಾಗಿದ್ದು, ತಾಲೂಕಿನಾದ್ಯಂತ ಎಲ್ಲಿ ನೋಡಿದರೂ ಜನ-ಜಾನುವಾರಗಳು ನೀರು ಹಾಗೂ ನೆರಳಿಗಾಗಿ ಪರಿತಪಿಸುವಂತಾಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಜನರು ತಂಪು ಪಾನೀಯ, ಎಳ ನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ.

ಪಟ್ಟಣದ ಗಾಂಧಿ ವೃತ್ತ, ಶಿವಾಜಿ ಸರ್ಕಲ್‌, ಅಂಬೇಡ್ಕರ್‌ ವೃತ್ತ, ಹಳೆ ಬಸ್ ನಿಲ್ದಾಣದಲ್ಲಿ ವ್ಯಾಪಾರಿಗಳು ಶಾಮಿಯಾನ ಹಾಕಿ ಹತ್ತಾರು ಟನ್‌ ಕಲ್ಲಂಗಡಿಗಳನ್ನು ತಂದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇನ್ನು ಎಳ ನೀರು, ಕಬ್ಬಿನ ಹಾಲು, ಕೋಲ್ಡ್ರಿಂಕ್ಸ್‌ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಅಧಿಕವಾಗಿದೆ.

ಆಯಾ ಋತುಮಾನಗಳಿಗೆ ಅನುಗುಣವಾಗಿ ಹಣ್ಣುಗಳ ಬೇಡಿಕೆ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿ. ಆದರೆ ಈಗ ಪಟ್ಟಣ ಸೇರಿ ತಾಲೂಕಿನಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಣ್ಣಿನಲ್ಲಿ ಶೇ.92ರಷ್ಟು ನೀರಿನಾಂಶವಿದ್ದು, ಇದನ್ನು ಸೇವನೆ ಮಾಡಿದಾಗ ದೇಹಕ್ಕೆ ಬೇಕಾಗುವ ನೀರಿನಾಂಶ ದೊರೆಯುತ್ತದೆ. ಅದೇ ರೀತಿ ಕಲ್ಲಂಗಡಿ ಹಣ್ಣಿನ ಸಿಪ್ಪೆ, ಬೀಜವನ್ನು ಕೂಡ ಬಳಕೆ ಮಾಡಬಹುದು. ಇದು ಬೇಸಿಗೆಯಲ್ಲಿ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು.

100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಗ್ರಾಂ ಕ್ಯಾಲರಿ ಮಾತ್ರವಿರುತ್ತದೆ. ಇದು ಬಾಯಾರಿಕೆ ಹಾಗೂ ಹಸಿವು ಕಡಿಮೆ ಮಾಡುತ್ತದೆ. ಅರ್ಜಿನೈನ್‌ ಎನ್ನುವ ಅಮೀನೋ ಆಮ್ಲವಿದ್ದು, ಇದು ಹೊಟ್ಟೆಯ ಭಾಗದಲ್ಲಿನ ಕೊಬ್ಬನ್ನು ಶೇ.60ರಷ್ಟು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ ಮನುಷ್ಯನ ಉತ್ತಮ ಆರೋಗ್ಯಕ್ಕೆ ಈ ಹಣ್ಣು ಉತ್ತಮ. ಆದ್ದರಿಂದ ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವೈದ್ಯರು.

ಪಟ್ಟಣದಲ್ಲಿ ವಿವಿಧ ಕಚೇರಿಗೆ ಕೆಲಸಕ್ಕೆ ಬರುವ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಬಿಸಿಲಿನ ಜಳದಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಒಂದು ಕೆಜಿಗೆ ₹30-35ರಂತೆ ಮಾರಾಟವಾಗುತ್ತಿದೆ.