ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಬಡಿಗೆ ಹಿಡಿತಾರೆ!

| Published : Nov 19 2023, 01:30 AM IST

ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಬಡಿಗೆ ಹಿಡಿತಾರೆ!
Share this Article
  • FB
  • TW
  • Linkdin
  • Email

ಸಾರಾಂಶ

ಜಾಹೀರಾತು, ಪ್ರಚಾರ ಮೂಲಕ ಸರ್ಕಾರ ಎತ್ತಿ ನಿಲ್ಲಿಸುವ ಕೆಲಸ: ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ

ಜಾಹೀರಾತು, ಪ್ರಚಾರ ಮೂಲಕ ಸರ್ಕಾರ ಎತ್ತಿ ನಿಲ್ಲಿಸುವ ಕೆಲಸ: ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಶಾಸಕರು ಹೊರಗೆ ಹೋಗಿ ಜನರ ಮುಂದೆ ನಿಲ್ಲಲಾಗದ ಪರಿಸ್ಥಿತಿ ಇದೆ. ಸ್ವಲ್ಪ ದಿನ ಕಳೆದರೆ ಜನರೇ ಬಡಿಗೆ ಹಿಡಿದು ಹೊಡೆಯುತ್ತಾರೆ. ನೆನಪಿಟ್ಟುಕೊಳ್ಳಿ ಕಾಂಗ್ರೆಸ್‌ ಸರ್ಕಾರವನ್ನು ಜನರು ಬಡಿಗೆ ಹಿಡಿದು ಓಡಿಸುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಂದು 6 ತಿಂಗಳ ಮೇಲಾಗಿದೆ. ಇವತ್ತಿಗೂ ಈ ಪರಿಸ್ಥಿತಿಯೆಂದರೆ ಏನರ್ಥ? ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿದೆಯೇ? ಖಜಾನೆಯನ್ನೇ ದಿವಾಳಿ ಮಾಡಿದ್ದಾರೆ. ಗುತ್ತಿಗೆದಾರರಿಗೆ ಕೆಲಸ ಮಾಡಿದ ಬಿಲ್ ಕೊಡಲು ಹಣ ಇಲ್ಲ. ಬಿಲ್ ಕೊಡಬೇಕೆಂದರೆ ಶೇ.60 ಕಮಿಷನ್ ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರು ನೀಡಬೇಕು ಎಂದು ಆರೋಪಿಸಿದರು.

ಪ್ರಚಾರದಲ್ಲಿ ಕಾಂಗ್ರೆಸ್ ಸರ್ಕಾರದವರೇನು ಕಡಿಮೆ ಇದ್ದಾರಾ? ದಿನನಿತ್ಯ ಜಾಹೀರಾತು, ಪ್ರಚಾರ, ಮಾರ್ಕೆಟಿಂಗ್ ಮೂಲಕ ಬಿದ್ದು ಹೋದ, ಸತ್ತು ಹೋದ ಈ ಸರ್ಕಾರವನ್ನು ಎತ್ತಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಏನೂ ಆಗಲ್ಲ. ಚುನಾವಣಾ ಪೂರ್ವದಲ್ಲಿ ಜನರಿಗೆ ಮರಳು ಮಾಡಿದ್ದರು.

ಈಗ ಜನರು ಕಾಂಗ್ರೆಸ್ಸಿನ ಮೋಸದ ಅರಿವಾಗಿ ರೋಸಿ ಹೋಗಿದ್ದಾರೆ ಎಂದರು.

ನೀರಾವರಿ ಪ್ರದೇಶಕ್ಕೆ ದುಡ್ಡು ನೀಡಿದ್ದಾರಾ? ಜಗಳೂರು ಸೇರಿ ಬರ ಪೀಡಿತ ತಾಲೂಕಿಗೆ ಏನು ಮಾಡಿದ್ದಾರೆ? ₹275-300 ಕೋಟಿಯನ್ನೋ ಕೊಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ನಷ್ಟವಾಗಿದೆ. ಜಿಲ್ಲೆಗೆ ₹10 ಕೋಟಿ ನೀಡಿದ್ದಾರೆ. ಇಷ್ಟಾದರೂ ಪ್ರಚಾರ ಕಡಿಮೆ ಮಾಡಿದ್ದಾರಾ? ಗುತ್ತಿಗೆದಾರನ ಮನೆಯಲ್ಲಿ ₹70 ಕೋಟಿಗೂ ಅಧಿಕ ಹಣ ಸಿಕ್ಕಿದೆ. ಭಂಡ, ಭ್ರಷ್ಟ ಸರ್ಕಾರ ಇದು ಎಂದು ಶ್ರೀರಾಮುಲು ವಾಗ್ದಾಳಿ ಮುಂದುವರಿಸಿದರು.

ರಾಮುಲು ದ್ವಿತೀಯಾ ಪುತ್ರಿ ವಿವಾಹಕ್ಕೆ ಆಮಂತ್ರಣ:

ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ನಿವಾಸಕ್ಕೆ ಭೇಟಿ ನೀಡಿದ ರಾಮುಲು ತಮ್ಮ ದ್ವಿತೀಯ ಪುತ್ರಿ ವಿವಾಹಕ್ಕೆ ಕುಟುಂಬ ಸಹಿತ ಆಗಮಿಸಲು ಆಹ್ವಾನ ಪತ್ರಿಕೆ ನೀಡಿ, ಆಹ್ವಾನಿಸಿದರು. ನಂತರ ಅಲ್ಲಿಂದ ಸಮೀಪದಲ್ಲೇ ಇರುವ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ತೆರಳಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳ ಸಭೆ ನಡೆಸಿದ ಶ್ರೀರಾಮುಲು ಎಲ್ಲರಿಗೂ ಮಗಳ ಮದುವೆಗೆ ಆಹ್ವಾನಿಸಿದರಲ್ಲದೇ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನೂ ನಡೆಸಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಯುವ ಮುಖಂಡ ಜಿ.ಎಸ್.ಶ್ಯಾಮ್‌, ತ್ಯಾವಣಿಗೆ ಕೃಷ್ಣಮೂರ್ತಿ, ದುರುಗೇಶ ನಿಟುವಳ್ಳಿ, ಕರಿಲಕ್ಕೇನಹಳ್ಳಿ ಓಂಕಾರಗೌಡ, ಫಣಿಯಾಪುರ ಲಿಂಗರಾಜ, ಗುಮ್ಮನೂರು ಶ್ರೀನಿವಾಸ, ಬಂಬೂ ಬಜಾರ್‌ನ ಎನ್.ಎಚ್.ಹಾಲೇಶ, ಜಗಳೂರು ನಿಜಲಿಂಗಪ್ಪ ಮದ ಮುತ್ತನಹಳ್ಳಿ, ಆವರಗೆರೆ ಗೋಶಾಲೆ ಸುರೇಶ, ಕಾರ್ತಿಕ್, ಕಿಚ್ಚ ಗಿರಿಯಾಪುರ ಇತರರಿದ್ದರು.