ಬಾಯಿಗೆ ಬಂದಂತೆ ಮಾತಾಡಿದರೆ ಜನರಿಂದ ಪಾಠ: ಸಿ.ಸಿ. ಪಾಟೀಲ

| Published : Oct 14 2025, 01:01 AM IST

ಬಾಯಿಗೆ ಬಂದಂತೆ ಮಾತಾಡಿದರೆ ಜನರಿಂದ ಪಾಠ: ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಎಸ್‌ಎಸ್ ಸಂಘಟನೆ 100 ವರ್ಷ ಪೂರೈಸಿದೆ. ಇಂತಹ ಸಂಘಟನೆ ವಿರುದ್ಧ ಮಾತನಾಡುವುದು ಸೂರ್ಯನಿಗೆ ಉಗುಳಿದಂತೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಗದಗ: ಪ್ರಧಾನಿಯಾಗಿದ್ದ ವೇಳೆ ನೆಹರು ಅವರು ಆರ್‌ಎಸ್ಎಸ್ ಬ್ಯಾನ್ ಮಾಡುತ್ತೇವೆ ಅಂತ ಹೇಳಿಕೆ ನೀಡಿದ್ದರು. ನಂತರ 1962ರ ಚೀನಾ ಯುದ್ಧದ ಸಮಯದಲ್ಲಿ ಆರ್‌ಎಸ್ಎಸ್ ಮಾಡಿದ ಕಾರ್ಯವೈಖರಿ ನೋಡಿ ಅವರೇ ಸಂಘಟನೆಯನ್ನು ಹಾಡಿ ಹೊಗಳಿದ್ದರು. ಅಧಿಕಾರ ಇದೆಯಂದು ಬಾಯಿಗೆ ಬಂದಂತೆ ಮಾತಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಸಿ.ಸಿ. ಪಾಟೀಲ ಎಚ್ಚರಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ಯಾವುದೇ ಸಚಿವರಿಗೂ ಕಿಂಚಿತ್ತೂ ಆಸಕ್ತಿ ಇಲ್ಲ. ಇದಕ್ಕೆ ಹಣಕಾಸಿನ ತೊಂದರೆಯೇ ಪ್ರಮುಖ ಕಾರಣ. ಜನರ ಗಮನ ಬೇರೆ ಕಡೆ ಸೆಳೆಯಲು ಹಲವಾರು ಕುತಂತ್ರವನ್ನು ಸರ್ಕಾರ ಮಾಡುತ್ತಿದೆ. ಆಡಳಿತದ ವೈಫಲ್ಯ ಜನರಿಗೆ ಗೊತ್ತಾಗಬಾರದು ಅಂತಾ ಈ ರೀತಿಯ ಸುದ್ದಿಯನ್ನು ಹರಿಬಿಡುತ್ತಾರೆ ಎಂದರು.

ಸಚಿವ ಪ್ರಿಯಾಂಕ ಖರ್ಗೆ ತಮ್ಮ ಖಾತೆಗಿಂತ ಬೇರೆ ಕೆಲಸದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತ ಮತದ ಓಲೈಕೆಗಾಗಿ ಆಡಳಿತ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಡೆಯುವುದನ್ನು ನಿಷೇಧ ಮಾಡಬೇಕು ಅಂತ ಖರ್ಗೆ ಹೇಳುತ್ತಾರೆ. ಆದರೆ, ಕೆಲ ಮುಸಲ್ಮಾನರು ರಸ್ತೆಯ ಮೇಲೆ ನಮಾಜ್ ಮಾಡುತ್ತಾರೆ. ಇದರ ಬಗ್ಗೆ ಪ್ರಶ್ನೆ ಮಾಡುವ ತಾಕತ್ತು ಪ್ರಿಯಾಂಕ ಖರ್ಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಇದೆಯಾ? ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಇದನ್ನು ಪ್ರಶ್ನಿಸುವ ಧೈರ್ಯ ಖರ್ಗೆ ಅವರಿಗೆ ಇಲ್ಲ. ಕೇವಲ ಹಿಂದುಗಳೇ ಇವರ ಟಾರ್ಗೆಟ್ ಎಂದು ಟೀಕಿಸಿದರು.

ಆರ್‌ಎಸ್‌ಎಸ್ ಸಂಘಟನೆ 100 ವರ್ಷ ಪೂರೈಸಿದೆ. ಇಂತಹ ಸಂಘಟನೆ ವಿರುದ್ಧ ಮಾತನಾಡುವುದು ಸೂರ್ಯನಿಗೆ ಉಗುಳಿದಂತೆ. ಆನೆ ಹೊರಟಾಗ ನಾಯಿ ಬೊಗಳುವುದು ಸಹಜ. ಇದು ಪ್ರಿಯಾಂಕ್ ಖರ್ಗೆ ಅವರಿಗೆ ಅನ್ವಯಿಸುತ್ತದೆ. ಸರ್ಕಾರಿ ಯಂತ್ರ ಹಾಳು ಮಾಡುವವರ ಹಾಗೂ ಪೊಲೀಸ್ ಸ್ಟೆಷನ್‌ಗೆ ಬೆಂಕಿ ಹಚ್ಚಿದವರ ವಿರುದ್ಧ ತಾಕತ್ತಿದ್ದರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ ಅವರು, ಆರ್‌ಎಸ್‌ಎಸ್ 100 ವರ್ಷ ಪೂರೈಸಿದ್ದು, ಇದನ್ನು ಯಾರಿಂದಲೂ ನಿಷೇಧ ಮಾಡಲು ಸಾಧ್ಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಹಿರಿಯ ಮುಖಂಡರಾದ ಎಂ.ಎಸ್. ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಸದಸ್ಯ ನಾಗರಾಜ ತಳವಾರ, ರಾಘವೇಂದ್ರ ಯಳವತ್ತಿ, ಪ್ರಕಾಶ್ ಅಂಗಡಿ, ಅನಿಲ ಅಬ್ಬಿಗೇರಿ, ಶಿವರಾಜಗೌಡ ಹಿರೇಮನಿಪಾಟೀಲ, ವಸಂತ ಮೇಟಿ, ಕುಮಾರ ಮಾರನಬಸರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.