ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಉನ್ನತ ಶಿಕ್ಷಣ ಸಚಿವರಾಗಿ ಎರಡು ವರ್ಷದಿಂದ ನೀವು ಏನು ಕೊಡುಗೆ ನೀಡಿದ್ದೀರಿ, ಪಾಳೇಗಾರಿಕೆ ಆಡಳಿತ ನಡೆಸುವುದನ್ನು ಜನರು ಸಹಿಸುತ್ತಾರೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಮುಂದಿನ ದಿನಗಳಲ್ಲಿ ನಿಮಗೆ ತಕ್ಕಶಾಸ್ತಿ ಮಾಡುತ್ತಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದರು.ನಗರದ ಪ್ರಗತಿ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ -೨೦೨೫ ಕಾರ್ಯಕ್ರಮದಲ್ಲಿ ಮಾತನಾಡಿ, ಸಚಿವರು ತಮ್ಮ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಸೇರಿದಂತೆ ವಿವಿಧ ವೃಂದಗಳಲ್ಲಿ ಎಷ್ಟು ಸಾವಿರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಉದ್ಯೋಗ ಸೃಷ್ಟಿಸುವಲ್ಲಿ ವಿಫಲಸಂವಿಧಾನದ ಪ್ರಕಾರ ಸರ್ಕಾರಿ ಕೆಲಸವನ್ನು ಪಡೆಯುವ ಹಕ್ಕು ಇದ್ದರೂ ಸರ್ಕಾರಿ ಹುದ್ದೆಗಳನ್ನು ಏಕೆ ಸೃಷ್ಟಿಸುತ್ತಿಲ್ಲ, ಸರ್ಕಾರವು ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಪ್ರಧಾನಮಂತ್ರಿ ಯಾರೇಆಗಿರಲಿ ಸಂವಿಧಾನದ ಅಡಿಯಲ್ಲಿ ಜನಪರ ಆಡಳಿತವನ್ನು ನೀಡಬೇಕು, ಯುವಕ-ಯುವತಿಯರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ ನೀಡಬೇಕೆಂದರು.
೧೯೯೦ರ ನಂತರ ಆರ್ಥಿಕ ಪರಿಸ್ಥಿತಿ ಬದಲಾವಣೆಯಾಗಿದ್ದು, ಖಾಸಗೀ ವಲಯಕ್ಕೆ ಉತ್ತೇಜನೆಯನ್ನು ನೀಡಿದ್ದರ ಫಲವಾಗಿ ಕಾರ್ಮಿಕರ ಶಕ್ತಿ ಕುಂದುವಂತಾಯಿತು, ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ೩೮ ಕಂಪನಿಗಳ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಉದ್ಯೋಗ ಮೇಳ ನಡೆಸಿ ತನ್ಮೂಲಕ ನಿರುದ್ಯೋಗಿ ಯುವಕ ಯುವತಿಯ ಉದ್ಯೋಗ ಅವಕಾಶ ಒದಗಿಸುವಂತಹ ಮೇಳವಾಗಿದೆ ಎಂದರು.ಸಚಿವರ ಟೀಕೆಗೆ ಉತ್ತರ
ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಈ ಉದ್ಯೋಗ ಮೇಳದ ಕುರಿತು ಕೆಲ ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಯಾವ ಪುರುಷಾರ್ಥಕ್ಕೆ ಉದ್ಯೋಗ ಮೇಳವೆಂದು ನುಡಿದಿದ್ದರು, ತಮ್ಮ ಮುಖ್ಯ ಉದ್ದೇಶ ಕ್ಷೇತ್ರದ ಯುವಕ-ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗವಕಾಶಗಳು ಒದಗಿಸುವುದಾಗಿದೆ ಎಂದರು.ಮೊದಲ ಹಂತದ ಕೈಗಾರಿಕಾ ಪ್ರದೇಶದಲ್ಲಿ ೫೧೬ ಎಕರೆ ಭೂಮಿಯನ್ನು ಪಡೆದು ಕೈಗಾರಿಕೆಗಳ ಸ್ಥಾಪನೆ ಮಾಡಲಾಗಿತ್ತು. ಎರಡನೇ ಹಂತ ಮತ್ತು ಮೂರನೇ ಹಂತ ನನ್ನ ಅವಧಿಯಲ್ಲಿ ಆಯಿತು. ಎರಡನೇ ಹಂತದಲ್ಲಿ ರಸ್ತೆ ನಿರ್ಮಾಣವನ್ನು ಮಾಡಿದ್ದು, ಕೆಐಬಿಡಿಐ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡರು ಮೊದಲು ರಸ್ತೆ, ನೀರು, ವಿದ್ಯುತ್, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗುತ್ತದೆ ಎಂದರು.
ಸಂಸದ ಎಂ.ಮಲ್ಲೇಶ್‌ಬಾಬು ಮಾತನಾಡಿ ನಮ್ಮ ತಂದೆ ಐಎಎಸ್ ಅಧಿಕಾರಿಯಾಗಿದ್ದ ಮುನಿಶಾಮಿರವರು ಮೈಸೂರು ಲ್ಯಾಂಪ್ಸ್ ಮತ್ತು ಮೈಸೂರು ಸ್ಯಾಂಡಲ್ ಕೈಗಾರಿಕೆಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಯುವಕ-ಯುವತಿಯರಿಗೆ ಉದ್ಯೋಗವಕಾಶಗಳನ್ನು ಕೊಡಿಸುವಲ್ಲಿ ಅವರ ಕೊಡುಗೆಯು ಅಪಾರವಾಗಿತ್ತೆಂದು ತಿಳಿಸಿದರು.2 ಸಾವಿರ ಉದ್ಯೋಗಾಕಾಂಕ್ಷಿಗಳು
ಈ ಉದ್ಯೋಗ ಮೇಳದಲ್ಲಿ ೨೦೦೦ ಯುವಕ-ಯುವತಿಯರು ಭಾಗವಹಿಸಿದ್ದು ೧೦೬೭ ಮಂದಿ ಯುವಕ-ಯುವತಿಯು ಉದ್ಯೋಗ ಮೇಳ ವಿವಿಧ ಕಂಪನಿಗಳಲ್ಲಿ ಕೆಲಸ ನಿರ್ವಹಿಸಲು ಅರ್ಹತೆ ಪಡೆದುಕೊಂಡರೆಂದು ಆಯೋಜನೆಯ ಸಂಘಟಕ ಸುರೇಂದ್ರರೆಡ್ಡಿ ತಿಳಿಸಿದರು.ಈ ಸಂದರ್ಭದಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜೆ.ವಿ.ನಾರಾಯಣಸ್ವಾಮಿ, ಬಿಜೆಪಿ ಮುಖಂಡ ದೇವನಹಳ್ಳಿ ಗೋಪಿ, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರುಗಳು ಮತ್ತು ಉದ್ಯೋಗಾಕಾಂಕ್ಷಿಗಳು, ಯುವಕ-ಯುವತಿಯರು ಉಪಸ್ಥಿತರಿದ್ದರು.