ಸಾರಾಂಶ
ರಟ್ಟೀಹಳ್ಳಿ: ಭರವಸೆ ಈಡೇರಿಸದ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವರು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 10 ವರ್ಷ ಆಡಳಿತ ಮಾಡಿ, ಅಚ್ಛೇ ದಿನ್ ಆಯೇಗಾ ಎಂದು ಹೇಳುತ್ತಲೇ ಜನರ ಮೋಡಿ ಮಾಡಿದರು. ಆದರೆ ಅಚ್ಛೇ ದಿನ್ ನೀಡದೆ ಮತ್ತೊಮ್ಮೆ ನಿಮ್ಮ ಮುಂದೆ ಮತ ಕೇಳುತ್ತಿದ್ದಾರೆ ಎಂದು ಹೇಳಿದರು.ರೈತರ ಆರ್ಥಿಕತೆ ದ್ವಿಗುಣ ಮಾಡುತ್ತೇನೆ ಎಂದು ನಂಬಿಸಿ, ಮತ ಪಡೆದು, ರೈತರ ಸಾವಿಗೆ ಬಿಜೆಪಿಯವರು ಕಾರಣರಾಗುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಬಂದರೆ ಮರುಕ್ಷಣವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿದೆ. ಮಹಾಲಕ್ಷ್ಮೀ ಯೋಜನೆಯಡಿ ದೇಶದ ಪ್ರತಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ನೀಡುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಪ್ರತಿ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸದೃಢರಾಗಲು ಸಹಾಯಕಾರಿಯಾಗುವುದು. ಆದ್ದರಿಂದ ಈ ಬಾರಿ ಚುನಾಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.ಬಿಜೆಪಿ ಅಭ್ಯರ್ಥಿ ಈ ಹಿಂದೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಗಡ್ಡದೇವರಮಠ, ನನ್ನನ್ನು ಗೆಲ್ಲಿಸಿದರೆ ಪ್ರತಿ 2 ತಿಂಗಳಿಗೊಮ್ಮೆ ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮೆಲ್ಲರ ಕುಂದು-ಕೊರತೆಗಳನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರು ನೀಡಿದ 5 ಗ್ಯಾರಂಟಿಗಳನ್ನು ಲೋಕಸಭಾ ಚುನಾವಣೆಯ ನಂತರ ನಿಲ್ಲಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಂಪೂರ್ಣ 5 ವರ್ಷ ಎಲ್ಲ ಗ್ಯಾರಂಟಿಗಳನ್ನು ಮುಂದುವರಿಸುತ್ತೇವೆ. ಇಲ್ಲವಾದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದರೂ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿ ರಾಜ್ಯದ ಜನತೆಗೆ ಆರ್ಥಿಕವಾಗಿ ಶಕ್ತಿ ನೀಡುತ್ತಿದೆ. ಆದರೆ ಬಿಜೆಪಿ ನಾಯಕರು ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಲೇವಡಿ ಮಾಡಲು ಯಾವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಸರ್ಕಾರ ರಚನೆಯಾಗಿ ನೂರು ದಿನಗಳಲ್ಲಿ 36 ಸಾವಿರ ಕೋಟಿಯ ಯೋಜನೆಯನ್ನು ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಹಾಗೂ 5 ಗ್ಯಾರಂಟಿಗಳನ್ನು ಮುಂದುವರಿಸಲು ಬಜೆಟ್‌ನಲ್ಲಿ ₹52 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.
ರಟ್ಟೀಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ನಿಂಗಪ್ಪ ಚಳಗೇರಿ, ತಿಪ್ಪಣ್ಣನವರ, ಮಹೇಶ ಗುಬ್ಬಿ, ಎ.ಕೆ. ಪಾಟೀಲ್, ಹನುಮಂತಗೌಡ ಭರಮಣ್ಣನವರ, ಸುನೀತಾ ದ್ಯಾವಕ್ಕಳವರ, ಸುಮಿತ್ರಾ ಪಾಟೀಲ್, ನಿಂಗಪ್ಪ ಕಡೂರ, ಪರಸಣ್ಣ ಏರೇಸ್ವಾಮಿ, ಪರಮೇಶಪ್ಪ ಕಟ್ಟೇಕಾರ, ವಿಜಯ ಅಂಗಡಿ, ನಾಗನಗೌಡ ಕೋಣ್ತಿ, ಪ್ರಭು ನಾಡಗೇರ, ಹನಮಗೌಡ ಹುಡೇದ ಇದ್ದರು.