ಸಾರಾಂಶ
ಕನ್ನಡಪ್ರಭವಾರ್ತೆ ಸಾಗರ ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಕಾಗಿಲ್ಲ. ಬದಲಾಗಿ ಅವರ ಕ್ರಿಯಾಶೀಲತೆಗೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ಸ್ಪೆಷಲ್ ಓಲಿಂಪಿಕ್ಸ್ ಭಾರತ್ ಕರ್ನಾಟಕ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ, ನಿಪ್ಪಾಣಿ ಕ್ಷೇತ್ರ ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು. ತಾಲೂಕಿನ ಭೀಮನಕೋಣೆ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಮುಂಗರವಳ್ಳಿ ಚೈತನ್ಯ ವಿಶೇಷ ಶಿಕ್ಷಣ ಶಾಲೆಯ ದಶಮಾನೋತ್ಸವ ಉದ್ಘಾಟಿಸಿ, ಸಂಸ್ಥೆಯ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಕಲಚೇತನರಿಗೆ ಸೂಕ್ತ ಮಾರ್ಗದರ್ಶನ, ಕಲಿಯುವ ಆಸಕ್ತಿಯನ್ನು ಗುರುತಿಸಿ ತರಬೇತಿ ನೀಡಬೇಕು ಎಂದು ಹೇಳಿದರು. ಭಗವಂತನ ಸೇವೆಗಿಂತ ಶ್ರೇಷ್ಠ:
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಬೇಕು. ಈ ಕೆಲಸವನ್ನು ಶಾಂತಲಾ ಅವರು ಮಾಡಿದ್ದಾರೆ. ಒಬ್ಬ ಪದವೀಧರೆಯಾಗಿ ಈ ಸಮಾಜಸೇವಾ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. 47 ಮಕ್ಕಳೊಂದಿಗೆ ಶಾಲೆ ನಡೆಸುತ್ತಿರುವುದು ಐತಿಹಾಸಿಕ ಸಾಧನೆ. ಹೀಗೆ ಸಮಾಜಸೇವೆ ಮಾಡುವವರನ್ನು ಬೆನ್ನುತಟ್ಟುವ ಕೆಲಸ ಮಾಡದಿದ್ದರೆ ಯಾರೂ ಸಮಾಜ ಸೇವೆಗೆ ಬರಲಾರರು. ಸರ್ಕಾರದ ನೆರವಿಲ್ಲದೇ ಇಂಥ ಸೇವೆ ಸಲ್ಲಿಸುತ್ತಿದ್ದಾರೆ. ಇದು ಭಗವಂತನ ಸೇವೆಗಿಂತ ಶ್ರೇಷ್ಠವಾದುದು ಎಂದು ಹೇಳಿದರು.ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬಿ.ಎಚ್. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಾಕಾಲ್ ಫೌಂಡೇಷನ್ ಸಂಸ್ಥಾಪಕ ಚಂದ್ರಶೇಖರ ಕಾಕಾಲ್, ಭೀಮನಕೋಣೆ ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷೆ ಮಮತಾಕೃಷ್ಣ, ಎಲ್.ಟಿ. ತಿಮ್ಮಪ್ಪ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಚಂದ್ರಪ್ಪ ಎನ್., ಶ್ರೀನಾಥ್ ಎ.ಎನ್., ಎಚ್.ಆರ್. ಶ್ರೀಪಾದ್, ಡಾ.ರಾಜನಂದಿನಿ ಕಾಗೋಡು, ಆನಂದಕುಮಾರ್, ಗ್ರಾ.ಪಂ. ಸದಸ್ಯೆ ಆಶಾ ಕೇಶವ, ಕೃಷ್ಣಪ್ಪ ಎಸ್.ಎ., ಅಮರೇಂದ್ರ, ಶಾಲೆ ಸಂಸ್ಥಾಪಕಿ ಶಾಂತಲಾ, ಸಂಸ್ಥೆ ಕಾರ್ಯದರ್ಶಿ ಸುರೇಶ್ ಮತ್ತಿತರರು ಹಾಜರಿದ್ದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಶಾಲಾ ಮಕ್ಕಳನ್ನು ಸನ್ಮಾನಿಸಲಾಯಿತು. ಪೋಷಕರು ಶಾಲಾ ಮುಖ್ಯಸ್ಥೆ ಶಾಂತಲಾ ಸುರೇಶ್ ದಂಪತಿಯನ್ನು ಸನ್ಮಾನಿಸಿದರು. ಶಾಂತಲಾ ಸುರೇಶ್ ಸ್ವಾಗತಿಸಿದರು. ಸುಶಾಂತ್ ಮತ್ತು ನಾಗರಾಜ್ ನಿರೂಪಿಸಿದರು. ಜಿ.ವಿ.ಹೆಗಡೆ ವಂದಿಸಿದರು.- - - ಬಾಕ್ಸ್
"ಶಾಂತಲಾ ಅವರ ಮಕ್ಕಳ ಕಾಳಜಿ ಶ್ಲಾಘನೀಯ " ಯಾರ ಮನೆಯಲ್ಲಾದರೂ ಚೆಂದದ ಮಗು ಹುಟ್ಟಿದರೆ ಸಂಭ್ರಮ ಪಡುತ್ತಾರೆ. ಆದರೆ ಸಹಜ ಮಗು ಇಲ್ಲವಾದರೆ ಚಿಂತೆ ಕಾಡುತ್ತದೆ. ಈ ಮಗುವನ್ನು ಹೇಗೆ ಸಾಕುವುದು ಎಂದು ಯೋಚನೆಗೆ ಬೀಳುತ್ತಾರೆ. ದೊಡ್ಡ ನಗರಗಳಲ್ಲಿ ಹಣ ಕೊಟ್ಟು ವಿಶೇಷ ಮಕ್ಕಳ ಶಾಲೆಗೆ ಬಿಡುವುದು ಸಹಜ. ಆದರೆ, ಗ್ರಾಮೀಣ ಭಾಗದ ಶಾಲೆಯಲ್ಲಿ ಮಕ್ಕಳ ಸೇವೆ ಮಾಡುವುದು ಕಷ್ಟದ ಕೆಲಸ. ಈ ಶಾಲೆಯ ಶಾಂತಲಾರವರು ಇಂಥ 47 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಅಭಿನಂದನೀಯ ಎಂದು ಶಶಿಕಲಾ ಜೊಲ್ಲೆ ಹೇಳಿದರು.
- - --2ಕೆ.ಎಸ್.ಎ.ಜಿ.1: ಚೈತನ್ಯ ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ನಿಪ್ಪಾಣಿ ಕ್ಷೇತ್ರ ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.