ಸಾರಾಂಶ
ರಾಣಿಬೆನ್ನೂರು: ಎಚ್‌ಐವಿ ಪೀಡಿತರಿಗೆ ಸಾಮಾನ್ಯರಂತೆ ಸಮಾಜದಲ್ಲಿ ಜೀವಿಸುವ ಹಕ್ಕಿದೆ. ಅಂಥವರನ್ನು ಕೀಳಾಗಿ ಕಾಣದೇ ಅಗತ್ಯ ಸಲಹೆ, ಸೂಚನೆ ಹಾಗೂ ಸಹಾಯವನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಎರಡನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಂಜುನಾಥ ಎಂ.ಎಸ್. ಹೇಳಿದರು.
ನಗರದ ಎಸ್‌ಜೆಎಂವಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವ ಏಡ್ಸ್ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ ಮಾತನಾಡಿ, ಯುವ ಜನಾಂಗ ಅಸುರಕ್ಷಿತ ಲೈಂಗಿಕ ಚಟುವಟಿಕಯಲ್ಲಿ ತೊಡಗಿದಾಗ ಏಡ್ಸ್‌ನಂತಹ ಮಾರಕ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಇದು ಅಂಟು ರೋಗವಾಗಿರದೆ ಸ್ವಯಾರ್ಜಿತವಾಗಿ ಅಥವಾ ಸ್ವಯಂಕೃತವಾಗಿ ಬರುವ ರೋಗ. ರಕ್ತಪರೀಕ್ಷೆಯ ಮೂಲಕ ರೋಗ ಪತ್ತೆ ಹಚ್ಚಬಹುದು. ಇದು ಬಂದ ಮೇಲೆ ಚಿಂತಿಸುವುದಕ್ಕಿಂತ ಬಾರದಂತೆ ನಿಯಂತ್ರಣ ಕ್ರಮ ಅನುಸರಿಸುವುದು ಸೂಕ್ತ ಎಂದರು.
ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ವಕೀಲರ ಸಂಘದ ಅಧ್ಯಕ್ಷ, ಬಿ.ಎಚ್. ಬುರಡಿಕಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಕೆಂಗೊಂಡ, ಕಾರ್ಯದರ್ಶಿ ಎನ್.ಎಂ. ಡೊಂಬರ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರ ಆಗಮಿಸಿದ್ದರು.ಪ್ರಾಚಾರ್ಯ ಡಾ. ಆರ್.ವಿ. ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ಏಡ್ಸ್ ತಡೆಗಟ್ಟುವ ವಿಧಾನ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕ ಆಸ್ಪತ್ರೆ ಆಪ್ತ ಸಮಾಲೋಚಕ ಮಾರುತಿ ಭಜಂತ್ರಿ ಉಪನ್ಯಾಸ ನೀಡಿದರು. ಪ್ರೊ. ಬಿ.ಆರ್. ಡಮ್ಮಳ್ಳಿ, ಪ್ರೊ. ಶಿವರಾಜಕುಮಾರ. ಪ್ರೊ. ಪ್ರಿಯಾಂಕಾ ಕೋಲಕಾರ, ಡಾ. ಅನಿಲಕುಮಾರ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.