ದೇವರ ಸೃಷ್ಟಿಯಾದ ಅಂಗವೈಕಲ್ಯತೆ ಶಾಪವಲ್ಲ, ಬದಲಾಗಿ ವರವಾಗಿದೆ. ಪ್ರತಿಭೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದ್ದರಿಂದ ನಾವೆಲ್ಲ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿ, ನೆರವಾಗುವ ಅವಶ್ಯಕತೆ ಇದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.
- ಡಿಸಿ ಕಚೇರಿ ಸಭಾಂಗಣದಲ್ಲಿ ವಿಶ್ವ ವಿಕಲಚೇತನರ ದಿನ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದೇವರ ಸೃಷ್ಟಿಯಾದ ಅಂಗವೈಕಲ್ಯತೆ ಶಾಪವಲ್ಲ, ಬದಲಾಗಿ ವರವಾಗಿದೆ. ಪ್ರತಿಭೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದ್ದರಿಂದ ನಾವೆಲ್ಲ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿ, ನೆರವಾಗುವ ಅವಶ್ಯಕತೆ ಇದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ವಿಕಲಚೇತನರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿವ್ಯಾಂಗರು ಸರ್ವಾಂಗರಿಗಿಂತ ಎಲ್ಲ ವಿಷಯಗಳಲ್ಲೂ ಮಿಗಿಲಾಗಿದ್ದಾರೆ. ಸರ್ಕಾರ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆ, ಸೌಲಭ್ಯಗಳನ್ನು ನೀಡಿದೆ. ವಿಕಲಚೇತನರಿಗೆ ದೊರೆಯುವ ಸೌಲಭ್ಯವನ್ನು ಅವರಿಗೆ ಸರಿಯಾಗಿ ತಲುಪಿಸುವ ಕೆಲಸ ಮಾಡಬೇಕು. ವಿಶೇಷಚೇತನರನ್ನೂ ಪ್ರೀತಿ, ವಿಶ್ವಾಸದಿಂದ ಕಂಡಲ್ಲಿ ಎಲ್ಲ ರಂಗಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರಬೇಕು. ನಿರಂತರವಾಗಿ ಅವರು ತಮ್ಮ ಕೆಲಸ ಮಾಡಿಕೊಂಡು ಹೋಗಲು ನೆರವಾಗಬೇಕು. ಸಮಯವನ್ನು ವ್ಯರ್ಥವಾಗಿಸದೇ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾತನಾಡಿ, ದೇವರ ಎಲ್ಲ ಸೃಷ್ಟಿಯಲ್ಲೂ ಒಂದೊಂದು ವಿಶೇಷತೆಯನ್ನು ನೀಡಿರುತ್ತಾನೆ. ಅದನ್ನು ತಿಳಿದು, ಅಂತಹ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು. ಇಲ್ಲಿರುವ ಪ್ರತಿಯೊಬ್ಬ ವಿಕಲಚೇತನರನ್ನು ನಾನು ವಿಶೇಷಚೇತನರೆಂದು ಕರೆಯುತ್ತೇನೆ. ವಿಕಲತೆಯನ್ನು ಶಾಪ ಎಂದು ಚಿಂತಿಸಬಾರದು. ಬಹಳ ಜನ ವಿಕಲಚೇತನರಲ್ಲಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಅಂತಹವರ ಸಾಧನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ವಿಶೇಷ ಸಾಧನೆ ಮಾಡಿರುವ ವಿಕಲಚೇತರನ್ನು ಮಾದರಿಯಾಗಿಸಿಕೊಂಡು ಜೀವನ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿಶೇಷಚೇತನರಿಗೆ ಬಹುಮಾನ ನೀಡಲಾಯಿತು. ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕೆ.ಕೆ. ಪ್ರಕಾಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜಾನಾಯ್ಕ, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾಕೌಸರ್ ಉಪಸ್ಥಿತರಿದ್ದರು.- - -
(ಕೋಟ್) ಜೀವನದಲ್ಲಿ ನಾವು ಯಾರಿಗೂ ಹೊರೆಯಾಗಿರಬಾರದು ಎಂದು ನಿಮ್ಮ ಆಶಯಗಳನ್ನು ನಮಗೆ ತಿಳಿಸಿದ್ದೀರಿ. ನಿಮ್ಮ ಜೊತೆಯಾಗಿ, ನಿಮ್ಮ ಕಷ್ಟಗಳಿಗೆ ಬೆನ್ನೆಲುಬಾಗಿ ಜಿಲ್ಲಾಡಳಿತ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ವಿಶೇಷಚೇತನರ ಬಾಳಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಮಾಡಲು ನಾವು ಸದಾ ನಿಮ್ಮೊಂದಿಗಿದ್ದೇವೆ.- ಶೀಲವಂತ ಶಿವಕುಮಾರ, ಅಪರ ಡಿಸಿ.
- - --3ಕೆಡಿವಿಜಿ37:
ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ವಿಶ್ವ ವಿಕಲಚೇತನರ ದಿನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.