ಬಸ್‌ ಬಂದ್‌ ಸುದ್ದಿ ತಿಳಿಯದೆ ಬಂದು ಪರಿತಪಿಸಿದ ಜನ

| Published : Aug 05 2025, 11:45 PM IST

ಸಾರಾಂಶ

ರಾಜ್ಯದಾದ್ಯಂತ ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಕಂಡುಬರಲಿಲ್ಲ. ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಚಾಲಕರು ಮತ್ತು ನಿರ್ವಾಹಕರು ಘೋಷಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಬೇಲೂರಿನ ಬಸ್ ನಿಲ್ದಾಣದಲ್ಲಿ ಯಾವುದೇ ಸರ್ಕಾರಿ ಬಸ್ಸುಗಳು ಚಲಿಸಲಿಲ್ಲ. ಸಾರಿಗೆ ಸಂಸ್ಥೆಯ ಚಾಲಕರು ನಿರ್ವಾಹಕರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಮಾಧ್ಯಮಗಳಲ್ಲಿ ಸತತವಾಗಿ ಬಿತ್ತರವಾದರೂ ಪ್ರಯಾಣಿಕರು ಸಾಕಷ್ಟು ಮಂದಿ ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರು. ಸಾಕಷ್ಟು ಸಮಯ ಕಾದರೂ ಬಸ್ ಬರದ ಕಾರಣ ಸರ್ಕಾರದ ಮೇಲೆ ಕಿಡಿಕಾರುವ ದೃಶ್ಯ ಸಾಮಾನ್ಯವಾಗಿತ್ತು.

ಕನ್ನಡಪ್ರಭ ವಾರ್ತೆ ಬೇಲೂರುವೇತನ ಪರಿಷ್ಕರಣೆ ಮತ್ತು ಬಾಕಿ ಹಣ ಪಾವತಿಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.ಬೆಳಗ್ಗೆ 6 ಗಂಟೆಯಿಂದ ರಾಜ್ಯದಾದ್ಯಂತ ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಕಂಡುಬರಲಿಲ್ಲ. ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಚಾಲಕರು ಮತ್ತು ನಿರ್ವಾಹಕರು ಘೋಷಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಬೇಲೂರಿನ ಬಸ್ ನಿಲ್ದಾಣದಲ್ಲಿ ಯಾವುದೇ ಸರ್ಕಾರಿ ಬಸ್ಸುಗಳು ಚಲಿಸಲಿಲ್ಲ. ಸಾರಿಗೆ ಸಂಸ್ಥೆಯ ಚಾಲಕರು ನಿರ್ವಾಹಕರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಮಾಧ್ಯಮಗಳಲ್ಲಿ ಸತತವಾಗಿ ಬಿತ್ತರವಾದರೂ ಪ್ರಯಾಣಿಕರು ಸಾಕಷ್ಟು ಮಂದಿ ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರು. ಸಾಕಷ್ಟು ಸಮಯ ಕಾದರೂ ಬಸ್ ಬರದ ಕಾರಣ ಸರ್ಕಾರದ ಮೇಲೆ ಕಿಡಿಕಾರುವ ದೃಶ್ಯ ಸಾಮಾನ್ಯವಾಗಿತ್ತು. ಮುಷ್ಕರದ ಪರಿಣಾಮವಾಗಿ ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋಗುವ ನೌಕರರು , ಆಸ್ಪತ್ರೆಗೆ ಹೋಗವವರು , ಸಾವು ನೋವಿಗೆ ತೆರಳುವವರು ಸಂಕಟ ಪಡುವಂತಾಯಿತು.ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಭೋಜೇಗೌಡ ಮಾತನಾಡಿ, ಸರ್ಕಾರ ಮತ್ತು ನಿಗಮದ ಮುಸುಕಿನ ಗುದ್ದಾಟಕ್ಕೆ ಬಡಪಾಯಿ ಪ್ರಯಾಣಿಕರು ಬಲಿಯಾಗಬೇಕಾಗಿದೆ. ರಾಜ್ಯದಲ್ಲಿ ಶೇ. 60 ಮಂದಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುವಂತೆ ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳಿಗೂ ಸ್ಪಂದಿಸಿ ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.