ಸುಭದ್ರ ಹಾಗೂ ವ್ಯಸನಮುಕ್ತ ನಗರವಾಗಿಸಲು ಜನರ ಸಹಕಾರ ಬಹುಮುಖ್ಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ಸುಭದ್ರ ಹಾಗೂ ವ್ಯಸನಮುಕ್ತ ನಗರವಾಗಿಸಲು ಜನರ ಸಹಕಾರ ಬಹುಮುಖ್ಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ನಗರದ ಎಪಿಎಂಸಿ ರೈತ ಸಮುದಾಯ ಭವನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮನೆ ಮನೆಗೆ ಸಿಸಿ ಟಿವಿ-ಮನೆ ಮನೆಮನೆಗೆ ಸುರಕ್ಷತೆ ಹಾಗೂ ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯ 600 ಜನರಿಗೆ ಒಬ್ಬ ಪೊಲೀಸನಿದ್ದು ಎಲ್ಲರಿಗೂ ಸುರಕ್ಷತೆ ನೀಡುವುದು ಕಷ್ಟ. ಹೀಗಾಗಿ ಮನೆಗಳಿಗೆ ಕ್ಯಾಮೆರಾ ಅಳವಡಿಸಿಕೊಳ್ಳಬೇಕಿದೆ. ಅನ್ಯ ದೇಶಗಳಲ್ಲಿ ಜನರು ಪೊಲೀಸರೊಂದಿಗೆ ಕೈಜೋಡಿಸಿದ ಪರಿಣಾಮ ಅಪರಾಧ ಚಟುವಟಿಕೆ ಕಡಿಮೆಯಾಗುತ್ತಿವೆ. ಇಲಾಖೆಗಿಂತಲೂ ಹೆಚ್ಚಿನ ಜವಾಬ್ದಾರಿ ಜನರ ಮೇಲಿದೆ. ಪ್ರತಿಯೊಬ್ಬರ ಮನೆಗೂ ಸಿಸಿ ಟಿವಿ ಇದ್ದರೆ ಅದು ಪೊಲೀಸರು ಇದ್ದಂತಾಗುತ್ತದೆ. ಮಕ್ಕಳ ಬಗ್ಗೆ ಕಣ್ಗಾವಲು ಇಡಲು ಸಹಕಾರಿಯಾಗಲಿದೆ. ನನ್ನ ಹಾಗೂ ನಗರಸಭೆ ಅನುದಾನದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನಗರದ ಪ್ರತಿಯೊಂದು ವೃತ್ತದಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಇದರಿಂದ ನಗರದ ಜನರು ಸುರಕ್ಷಿತವಾಗಿ ಇರಲು ಸಹಕಾರಿಯಾಗಲಿದೆ. ನಗರದಲ್ಲಿ ಕಳೆದ 10 ವರ್ಷಗಳಿಂದ ಡ್ರಗ್ಸ್ ವ್ಯಸನಿಗಳು ಹೆಚ್ಚಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದರು. ಎಸ್‌ಪಿ ಯಶೋಧಾ ಒಂಟಗೋಡಿ ಮಾತನಾಡಿ, ನಗರದಲ್ಲಿ 30 ಸಾವಿರ ಮನೆಗಳಿದ್ದು ಸಾರ್ವಜನಿಕ ಪ್ರದೇಶ ಸೇರಿದಂತೆ ಒಂದು ಸಾವಿರ ಕ್ಯಾಮೆರಾಗಳಿವೆ. ಈ ತರಹವಿದ್ದರೆ ಸುರಕ್ಷತೆ ಕಡಿಮೆಯಾಗುತ್ತದೆ. ರಾತ್ರಿ ಪಾಳಿ ಮಾಡಿದರೂ ಪೊಲೀಸರಿಗೆ ತಲೆನೋವಾಗುತ್ತದೆ. ಎಲ್ಲ ಕೆಲಸಗಳನ್ನು ಮಾಡಿ ಪೋಲಿಸರು ನಿಮಗೆ ಸುರಕ್ಷತೆ ನೀಡುವುದು ಕಷ್ಟ. ಹೀಗಾಗಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಮನೆ ಹಿಂದೆ ಹಾಗೂ ಮುಂದೆ ಕ್ಯಾಮೆರಾ ಹಾಕಿಕೊಳ್ಳಬೇಕಿದೆ. ಇದರಿಂದ ಪೊಲಿಸರಿಗೆ ಅಪರಾಧದ ಚಟುವಟಿಕೆ ಕಡಿಮೆ ಮಾಡಲು ಸಾಧ್ಯ. ಒಂದು ಕೋಟಿ ಖರ್ಚು ಮಾಡಿ ಮನೆ ನಿರ್ಮಿಸಿಕೊಳ್ಳುವ ಜನರು ಕೇವಲ ಸಾವಿರಾರು ಖರ್ಚು ಮಾಡಿ ಕ್ಯಾಮೆರಾ ಹಾಕಿಕೊಳ್ಳಲು ಮೀನ ಮೇಷ ಮಾಡುವುದು ಸರಿಯಲ್ಲ. ಮನೆಯ ಮುಂದೆ ಹಾಗೂ ಹಿಂದುಗಡೆ ಗುಣಮಟ್ಟದ ಬಾಗಿಲುಗಳನ್ನು ಹಾಕಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಮನೆಯಲ್ಲಿನ ಬಂಗಾರ ಕಾಯಲು ಅನುಕೂಲವಾಗುತ್ತದೆ. ಡಗ್ಸ್ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಮುಂದಾಗಿದ್ದು ಡ್ರಗ್ಸ್‌ನಿಂದ ಹೊರಬರಲು ಪೊಲೀಸರು ಮಾರ್ಗದರ್ಶನ ನೀಡುತ್ತಾರೆ ಎಂದರು.ಡಿಎಸ್‌ಪಿ ಲೋಕೇಶ, ತಾಪಂ ಇಒ ಡಾ. ವೆಂಕಟೇಶ ಸಣ್ಣಬಿದರಿ, ಗ್ರಾಮೀಣ ಪಿಐ ನಾಗೇಶ ಕಾಡದೇವರ, ಶಹರ ಸಿಪಿಐ ವೆಂಕಟೇಶ, ಪಿಎಸ್‌ಐ ಪರಮೇಶ ಡಿ.ಜಿ. ವೇದಿಕೆಯಲ್ಲಿದ್ದರು. ನಂತರ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸುವ ಕುರಿತು ತಿಳುವಳಿಕೆ ನೀಡಲಾಯಿತು.