ಸಾರಾಂಶ
ಒಬ್ಬ ನಿಜವಾದ ವಕೀಲ ವ್ಯಾಜ್ಯಗಳನ್ನು ಹೂಡುವುದಕ್ಕೆ ಪ್ರಚೋದಿಸದೆ ರಾಜಿ ಮತ್ತು ಸಂಧಾನಗಳಿಗೆ ಪ್ರೇರೇಪಿಸಬೇಕು. ಹಾಗಿದ್ದಾಗ, ಮಾತ್ರ ಸಮಾಜದಲ್ಲಿ ವಕೀಲ ವೃತ್ತಿ ಶ್ರೇಷ್ಠವಾಗಬಲ್ಲದು.
ಹುಬ್ಬಳ್ಳಿ:
ಜನಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಿದ್ದು ಅವುಗಳಿಗೆ ಪರಿಹಾರ ಮತ್ತು ನ್ಯಾಯ ಕಂಡುಕೊಳ್ಳಲು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸರ್ಕಾರ ಜನತಾ ನ್ಯಾಯಾಲಯಗಳನ್ನು ಸೃಷ್ಟಿಸಿದೆ. ಖರ್ಚಿಲ್ಲದೆ ಬಹಳ ಶೀಘ್ರವಾಗಿ ಮತ್ತು ಸುಲಭವಾಗಿ ಪರಿಹಾರ ನೀಡುವುದು ಮತ್ತು ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಕಾಯಂ ಜನತಾ ನ್ಯಾಯಾಲಯಗಳ ಕಾರ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮತ್ತು ಕಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ನಾಗರಾಜಪ್ಪ ಎ.ಕೆ. ಹೇಳಿದರು.ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾಯಂ ಜನತಾ ನ್ಯಾಯಾಲಯದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಂ ಜನತಾ ನ್ಯಾಯಾಲಯ ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಾತ್ರ ಪರಿಹರಿಸುವ ಅಧಿಕಾರ ವ್ಯಾಪ್ತಿ ಹೊಂದಿದೆ. ಬ್ಯಾಂಕಿಂಗ್, ವಿದ್ಯುಚ್ಛಕ್ತಿ, ಅನಿಲ, ದೂರಸಂಪರ್ಕ, ಕಾರ್ಪೊರೇಶನ್ ಸೇರಿ ಇನ್ನು ಮುಂತಾದ ಪ್ರಾಧಿಕಾರಗಳು ತಮ್ಮ ಸೇವೆಯನ್ನು ಸಲ್ಲಿಸುವಾಗ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದಲ್ಲಿ ಮತ್ತು ಸೇವಾ ಕೊರತೆಯಲ್ಲಿ ನ್ಯೂನತೆ ಕಂಡು ಬಂದಲ್ಲಿ ಅಂತಹ ಪ್ರಕರಣಗಳನ್ನು ಈ ನ್ಯಾಯಾಲಯಕ್ಕೆ ತಂದು ರಾಜಿ ಮತ್ತು ಸಂಧಾನಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿ, ಒಬ್ಬ ನಿಜವಾದ ವಕೀಲ ವ್ಯಾಜ್ಯಗಳನ್ನು ಹೂಡುವುದಕ್ಕೆ ಪ್ರಚೋದಿಸದೆ ರಾಜಿ ಮತ್ತು ಸಂಧಾನಗಳಿಗೆ ಪ್ರೇರೇಪಿಸಬೇಕು. ಹಾಗಿದ್ದಾಗ, ಮಾತ್ರ ಸಮಾಜದಲ್ಲಿ ವಕೀಲ ವೃತ್ತಿ ಶ್ರೇಷ್ಠವಾಗಬಲ್ಲದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿದರು. ಕುಲಸಚಿವರಾದ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಾ. ರತ್ನಾ ಆರ್. ಭರಮಗೌಡರ, ಡಾ. ಭೀಮಾಬಾಯಿ ಎಸ್. ಮುಲಗೆ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿನ್ನಮ್ಮ ಮಠದ ಸ್ವಾಗತಿಸಿದರು. ಅನನ್ಯ ವಂದಿಸಿದರು. ರೇಣುಕಾ ತುಳಿಸಿಗೇರಿ ನಿರೂಪಿಸಿದರು.