ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತ

| Published : Jun 12 2024, 12:38 AM IST

ಸಾರಾಂಶ

ಮುಂಗಾರು ಮಳೆಯೇ ಏನು ನಿನ್ನ ಹನಿಗಳೇ ಲೀಲೆ ಎಂದು ಜಿಲ್ಲೆಯ ಜನರು ಗುನಗಲಾರಂಭಿಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗ ಜನಜೀವನ ಅಸ್ತವ್ಯಸ್ತವಾಗುತ್ತಿದೆ.

ಕೆರೆಯಂತಾದ ರಸ್ತೆಗಳು, ತುಂಬಿ ಹರಿದ ಚರಂಡಿಗಳು

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಂಗಾರು ಮಳೆಯೇ ಏನು ನಿನ್ನ ಹನಿಗಳೇ ಲೀಲೆ ಎಂದು ಜಿಲ್ಲೆಯ ಜನರು ಗುನಗಲಾರಂಭಿಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗ ಜನಜೀವನ ಅಸ್ತವ್ಯಸ್ತವಾಗುತ್ತಿದೆ.

ಹೌದು, ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಮಂಗಳವಾರ ನಾಲ್ಕಾರು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೊಪ್ಪಳ ಎಲ್ಲಿ ನೋಡಿದರೂ ನೀರೇ ನೀರು. ರಸ್ತೆಯಲ್ಲ ಕೆರೆಯಂತಾದವು. ಚರಂಡಿಗಳು ತುಂಬಿ ಹರಿದವು. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದವು.

ಬಹುತೇಕ ರಸ್ತೆಗಳು ನೀರುಮಯವಾಗುವಂತೆ ಆಯಿತು. ಜವಾಹರ ರಸ್ತೆಯಲ್ಲಿ ಹಳ್ಳದಂತೆ ನೀರು ಹರಿದಿದ್ದರಿಂದ ಕೆಲಕಾಲ ಸಂಚಾರಕ್ಕೂ ಸಮಸ್ಯೆಯಾಯಿತು.

ಜವಾಹರ ರಸ್ತೆಯಲ್ಲಿ ಸುಮಾರು ಎರಡು ಅಡಿಯಷ್ಟು ಎತ್ತರದಲ್ಲಿ ಹರಿಯುತ್ತಿದ್ದ ನೀರು ಕೆಲಕಾಲ ಆತಂಕ ಉಂಟು ಮಾಡಿತ್ತು. ಹೀಗಾಗಿ, ಜೆಪಿ ಮಾರುಕಟ್ಟೆ ಸೇರಿದಂತೆ ಮೊದಲಾದೆಡೆ ನೀರು ನುಗ್ಗಿದ್ದರಿಂದ ತರಕಾರಿ ಮಾರುಕಟ್ಟೆಯಲ್ಲಿ ಗಲಿಬಿಲಿಯಾಗುವಂತೆ ಮಾಡಿತು.

ಕೊಪ್ಪಳ ಹಮಾಲರ ಕಾಲನಿಯಲ್ಲಿ ಪ್ರತಿ ಬಾರಿ ಮಳೆಯಾದಾಗ ಆಗುವ ಸಮಸ್ಯೆ ಮತ್ತೆ ಕಾಣಿಸಿಕೊಂಡಿತು. ನಿವಾಸಿಗಳು ಹಿಡಿಶಾಪ ಹಾಕಿದರು ಕೆಲವರ ಮನೆಯಲ್ಲಿ ನೀರು ನುಗ್ಗಿದವು.

ಬಸ್ ನಿಲ್ದಾಣ ಪ್ರದೇಶದಲ್ಲಿ ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಗುವಂತೆ ಮಾಡಿತು. ವರ್ಣೇಕರ್ ಕಾಂಪ್ಲೆಕ್ಸ್ ಬಳಿ ನೀರು ತುಂಬಿ ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡಿದರು. ರಾಜಕಾಲುವೆ ತುಂಬಿ ಹರಿಯಿತು.

ರಾಯರ ಮಠದ ಪ್ರದೇಶದಲ್ಲಿ ನೀರು ನುಗ್ಗಿ ಸಮಸ್ಯೆಯನ್ನುಂಟು ಮಾಡಿತು. ಎಲ್ಲಿ ನೋಡಿದರೂ ನೀರು ಕೆರೆಯಂತೆ ನಿಂತಿತ್ತು. ಶ್ರೀರಾಘವೇಂದ್ರ ಮಠದ ಹಿಂಭಾಗದಲ್ಲಿ ನೀರು ದೊಡ್ಡ ಪ್ರಮಾಣದಲ್ಲಿ ನಿಂತಿದ್ದು, ಅಲ್ಲಿನ ನಿವಾಸಿಗಳಲ್ಲಿ ಆತಂಕವುಂಟಾಗುವಂತೆ ಮಾಡಿತು.

ಗಣೇಶ ತಗ್ಗು ಗಣೇಶ ನಗರ ಎಂದೇ ಕರೆಯುವ ಗಣೇಶ ನಗರದಲ್ಲಿಯೂ ಮತ್ತೆ ಅದೇ ಸಮಸ್ಯೆ. ರಾಜಕಾಲುವೆಯ ನೀರು ದಾರಿಯಿಲ್ಲದೇ ಗಣೇಶ ನಗರಕ್ಕೆ ನುಗ್ಗುವುದು ಇಲ್ಲಿ ಸರ್ವೇ ಸಾಮಾನ್ಯ. ಮಳೆಯಾದಾಗಲೆಲ್ಲ ದೂರು ನೀಡಿದರೂ ನಂತರ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ. ಪರಿಣಾಮ ಮಳೆಯಾಗುತ್ತಿದ್ದಂತೆ ಗಣೇಶ ನಗರದ ಜನರು ಬೆಚ್ಚಿಬೀಳುತ್ತಾರೆ.