ತೀವ್ರ ಬರ, ಮೇಲಿಂದ ಮೇಲಿ ಹಾಲು, ಮೊಸರು ಹಾಗೂ ಬಸ್ ದರ ಹೆಚ್ಚಳ, ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳು, ಬಹುದೂರ ಹೊರಟುಹೋದ ಹಿಂಗಾರು ಹಂಗಾಮು, ಟಿಎಲ್ಬಿಸಿ ಎನ್ಆರ್ಬಿಸಿ ನೀರಿಗಾಗಿ ನಿಲ್ಲದ ರೈತರ ಹೋರಾಟ,ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಗಲಾಟೆ, ಕೊಲೆ ಪ್ರಕರಣಗಳು, ಎಲ್ಲೂ ನಡೆಯದಂತ ಸ್ಮಶಾನದ ಶವಗಳನ್ನು ಹೊರಗೆ ತೆಗೆದು ಮಾರಾಟ ದಂಧೆ, ಸಾಲಕ್ಕಾಗಿ ಪತ್ನಿ, ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ, ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳುಗಾರಿಕೆ, ಮಾದಕ ವಸ್ತುಗಳ ಸೇವನೆ ಹಾವಳಿ ಹೀಗೆ ಹೇಳುತ್ತಾ ಹೋದರೆ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುತೀವ್ರ ಬರ, ಮೇಲಿಂದ ಮೇಲಿ ಹಾಲು, ಮೊಸರು ಹಾಗೂ ಬಸ್ ದರ ಹೆಚ್ಚಳ, ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳು, ಬಹುದೂರ ಹೊರಟುಹೋದ ಹಿಂಗಾರು ಹಂಗಾಮು, ಟಿಎಲ್ಬಿಸಿ ಎನ್ಆರ್ಬಿಸಿ ನೀರಿಗಾಗಿ ನಿಲ್ಲದ ರೈತರ ಹೋರಾಟ,ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಗಲಾಟೆ, ಕೊಲೆ ಪ್ರಕರಣಗಳು, ಎಲ್ಲೂ ನಡೆಯದಂತ ಸ್ಮಶಾನದ ಶವಗಳನ್ನು ಹೊರಗೆ ತೆಗೆದು ಮಾರಾಟ ದಂಧೆ, ಸಾಲಕ್ಕಾಗಿ ಪತ್ನಿ, ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ, ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳುಗಾರಿಕೆ, ಮಾದಕ ವಸ್ತುಗಳ ಸೇವನೆ ಹಾವಳಿ ಹೀಗೆ ಹೇಳುತ್ತಾ ಹೋದರೆ ಸಾಲು ಸಾಲು ಸಮಸ್ಯೆಗಳು ಜಿಲ್ಲೆಯ ಜನರನ್ನು ಕಾಡುತ್ತಲೆಯೇ ಇದ್ದು, ಇವುಗಳು ದೀಪಾವಳಿ ಹಬ್ಬದ ಸಮಯದಲ್ಲಿ ಜನಸಾಮಾನ್ಯರನ್ನು ದಿವಾಳಿಯತ್ತು ಸಾಗುವಂತೆ ಮಾಡುತ್ತಿವೆ.
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಜನತೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಜನಸಾಮಾನ್ಯರ ಬದುಕು ಮಾತ್ರ ಆರ್ಥಿಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದೆ. ಒಂದೆಡೆ ತೀವ್ರ ಬರದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡು ರೈತಾಪಿ ವರ್ಗ ಕಂಗಾಲಾಗಿದ್ದರೆ, ಮತ್ತೊಂದೆಡೆ ಬಸ್ ಪ್ರಯಾಣ ದರ, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಬಜೆಟ್ ಸಂಪೂರ್ಣ ಏರುಪೇರಾಗಿದೆ.ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಜನರು ಹತ್ತು ಬಾರಿ ಯೋಚಿಸುವಂತಾಗಿದೆ. ಬೆಲೆ ಏರಿಕೆ, ಆದಾಯದ ಕೊರತೆ ಹಾಗೂ ಕೃಷಿ ನಷ್ಟದ ನಡುವೆ ಹಬ್ಬದ ಸಂಭ್ರಮಕ್ಕಿಂತ ಬದುಕಿನ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿ ಸಿದೆ. ಇದರ ನಡುವೆ ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ಬೆಳಕಿಗೆ ಬರುತ್ತಿರುವ ಅಪರಾಧ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿವೆ. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ, ಸ್ಮಶಾನದಲ್ಲಿ ಶವಗಳ ಮಾರಾಟಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣ, ದೀನದಲಿತ ಸಮುದಾಯದವರ ಮೇಲಿನ ದೌರ್ಜನ್ಯ ಹಾಗೂ ವ್ಯಾಪಾರಿಯ ಕೊಲೆ ಪ್ರಕರಣಗಳು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ಒಂದರ ಹಿಂದೆ ಒಂದರಂತೆ ಇಂತಹ ಘಟನೆಗಳು ವರದಿಯಾಗುತ್ತಿದ್ದರೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಪರಿಣಾಮಕಾರಿ ಕ್ರಮಗಳಾಗುತ್ತಿವೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯ ಹಾಗೂ ಆಡಳಿತದ ಹೊಣೆಗಾರಿಕೆ ಕುರಿತು ಜನರಲ್ಲಿ ಹಲವು ಅನುಮಾನಗಳು ಮೂಡಿವೆ. ಅಪರಾಧ ಪ್ರಕರಣಗಳು ಕೇವಲ ಪ್ರತ್ಯೇಕ ಘಟನೆಗಳಾಗಿ ಉಳಿಯದೆ, ಆಡಳಿತ ವ್ಯವಸ್ಥೆಯ ಕಾರ್ಯವೈಖರಿ, ಪೊಲೀಸ್ ಇಲಾಖೆಯ ಹೊಣೆಗಾರಿಕೆ ಮತ್ತು ಸಾಮಾಜಿಕ ನ್ಯಾಯದ ಅನುಷ್ಠಾನದ ಕುರಿತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿವೆ. ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಜಿಲ್ಲೆಯ ಜನತೆ ಬರ, ಬೆಲೆ ಏರಿಕೆ ಮತ್ತು ಅಪರಾಧ ಪ್ರಕರಣಗಳ ನಡುವೆ ನಲುಗುತ್ತಿದ್ದರೆ, ಆಡಳಿತ ವರ್ಗದ ಮೌನ ಜನರ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಗಿದೆ. ಹಬ್ಬದ ಬೆಳಕಿನ ನಡುವೆ ಜನಸಾಮಾನ್ಯರ ಬದುಕಿನ ಕತ್ತಲೆಯನ್ನು ಹೋಗಲಾಡಿ ಸುವವರು ಯಾರು? ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ, ಕಠಿಣ ಕ್ರಮ ಹಾಗೂ ಜನಪರ ಆಡಳಿತಕ್ಕೆ ಮುಂದಾಗುವವರು ಯಾರು ಎಂಬ ಪ್ರಶ್ನೆ ಇದೀಗ ಜಿಲ್ಲೆಯ ಜನತೆಯದ್ದಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಮೇಲಿಂದ ಮೆಲೆ ಹಾಲು, ಮೊಸಲು ಹಾಗೂ ಬಸ್ ದರ ಹೆಚ್ಚಳ ಮಾಡಿರುವುದು ಖಂಡನೀಯ ವಿಷಯವಾಗಿದೆ. ತೀವ್ರ ಬರಗಾಲದಲ್ಲಿ ಬೆಳೆಯಿಲ್ಲದೇ ರೈತರು ತೀರ್ಥ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಸೂಕ್ತ ಬರ ಪರಿಹಾರವೂ ಸಿಗುತ್ತಿಲ್ಲ, ಜಮೀನಿನಲ್ಲಿ ಉಳಿದ ಬೆಳೆಯನ್ನು ಉಳಿಸಿಕೊಳ್ಳಲು ನೀರು ಸಿಗದಂತಾಗಿದೆ, ಈ ಎಲ್ಲ ಸಂಕಷ್ಟಗಳು ಕಣ್ಣಮುಂದಿದ್ದರೂ ಸಹ ಬೆಲೆ ಏರಿಕೆ ಕ್ರಮ ವಹಿಸಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲದಂತಾಗಿದ್ದು, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಲಾಗುವುದು ಎಂದು ರಾಯಚೂರು ನಗರ ಬಿಜೆಪಿ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಹೇಳಿದರು.