ಸಾರಾಂಶ
ಗದಗ: ದೇಶದ ಸಮಗ್ರ ಅಭಿವೃದ್ಧಿ, ನೆಮ್ಮದಿಯ ಬದುಕಿಗಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಾರೆ ಎಂದು ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬೇರೆ ಕ್ಷೇತ್ರದಲ್ಲಿ ಅಧಿಕಾರಕ್ಕೆ ರಾಜಕಾರಣ ಇದ್ದರೆ, ಗದಗ ಕ್ಷೇತ್ರದಲ್ಲಿ ಸಂಘರ್ಷದ ರಾಜಕಾರಣ ಇದೆ. ಬಿಜೆಪಿ ಕಾರ್ಯಕರ್ತರು ತತ್ವ-ಸಿದ್ಧಾಂತಗಳನ್ನು ಬಿಡದೆ, ಪಕ್ಷದ ಬಲವರ್ಧನೆ ದುಡಿಯುತ್ತಾರೆ ಎಂದು ಮಾಜಿ ಸಿಎಂ, ಲೋಕಸಭೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಅಮೃತ ಯೋಜನೆಯಡಿ ₹191 ಕೋಟಿ ಅನುದಾನ ಬಂದಿದೆ. ಕಿಸಾನ್ ಸಮ್ಮಾನ ಯೋಜನೆಯಿಂದ 1.24 ಲಕ್ಷ ರೈತರಿಗೆ ₹347 ಕೋಟಿ ಅನುದಾನ ವಿತರಣೆ ಆಗಿದೆ. ಬಡವರಿಗೆ ಉಜ್ವಲ ಗ್ಯಾಸ್ ವಿತರಣೆ ಆಗಿದೆ. ಕೇಂದ್ರದಿಂದಲೇ ಬಡವರಿಗೆ ಅಕ್ಕಿ ವಿತರಣೆ ಆಗುತ್ತಿದೆ ಎಂದು ಅವರು ಹೇಳಿದರು. ಪ್ರಧಾನಿ ಅವರ ಅಭಿವೃದ್ಧಿ ಕಾರ್ಯಗಳು ದೇಶದ ಭದ್ರತೆ ಕುರಿತು ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಗದಗ ಅಭಿವೃದ್ಧಿ ಕಾಣುತ್ತದೆ ಎಂದರು.
ರಸ್ತೆ, ರೈಲ್ವೆ, ನೀರು ಯೋಜನೆಗಳಲ್ಲಿ ಬಿಜೆಪಿಯ ಪಾಲು ಅಧಿಕ. ತೀವ್ರಗತಿಯಲ್ಲಿ ಅಭಿವೃದ್ಧಿ ಆಗಬೇಕಾದರೆ ಹೋರಾಟ, ತಿಕ್ಕಾಟ ಸಾಮಾನ್ಯ. ಗದಗ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನವಿಟ್ಟು ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಜಲಜೀವನ್, ಕಿಸಾನ್ ಸಮೃದ್ಧಿ ಸೇರಿದಂತೆ ಹಲವು ಯೋಜನೆ ಕೇಂದ್ರ ಸರ್ಕಾರ ತಂದಿದೆ. ಯೋಜನೆ ಜಾರಿ ಮಾಡುವಲ್ಲಿ ಜಾತಿಗೆ ಯೋಜನೆ ಸೀಮಿತಗೊಳಿಸಲಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರುವುದು ನಿಶ್ಚಿತ. ಎಚ್.ಕೆ. ಪಾಟೀಲ ಅವರು ಇಂದು ಭೂಮಿಪೂಜೆ ಮಾಡುತ್ತಿರುವ ಎಲ್ಲ ಯೋಜನೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು ಎಂಬುದು ಮತದಾರರಿಗೆ ತಿಳಿಸಿ ಹೇಳಬೇಕು. ಗದಗ ಮಧ್ಯಭಾಗದಲ್ಲಿ ಇರುವ ರೈಲ್ವೆ ಬ್ರಿಡ್ಜ್‌ಗೆ ₹40 ಕೋಟಿಯನ್ನು ಕೇಂದ್ರದ ಸಂಪುಟ ಸಭೆ ಮಂಜೂರು ಮಾಡಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಬೊಮ್ಮಾಯಿ ಅವರು ಎಸ್ಸಿ-ಎಸ್ಟಿ ಮೀಸಲಾತಿಯನ್ನು ಶೇ. 18ರಿಂದ ಶೇ. 24ಕ್ಕೆ ಹೆಚ್ಚಿಸಿದರು. ರೈತಮಕ್ಕಳು, ಕಾರ್ಮಿಕ ಮಕ್ಕಳಿದೆ ವಿದ್ಯಾನಿಧಿ ನೀಡಿ ಮಹತ್ವದ ಯೋಜನೆ ಜಾರಿಗೊಳಿಸಿದರು. ಅವರ ಕೆಲಸಗಳು ಗೆಲುವಿಗೆ ಶ್ರೀರಕ್ಷೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಅತ್ಯಂತ ಸೂಕ್ತ ಅಭ್ಯರ್ಥಿ. ಇದೇ ಕ್ಷೇತ್ರದಿಂದ ಎರಡೂ ಬಾರಿ ವಿಪ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿ, ಮಾಜಿ ಸಿಎಂ ಇಂದು ನಮ್ಮ ಅಭ್ಯರ್ಥಿ ಇದು ನಮ್ಮೆಲ್ಲರ ಹೆಮ್ಮೆ ಎಂದರು.
ಶಾಸಕ ಅರವಿಂದ ಬೆಲ್ಲದ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.