ಶರಣರ ವಚನಗಳ ಸ್ಮರಣೆಯಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯಲು ಸಾಧ್ಯ

ಸಂಡೂರು: ಶರಣರ ವಚನ ಮಾನವೀಯ ಮೌಲ್ಯ ಬೆಳೆಸುತ್ತವೆ. ವಚನಗಳ ಅನುಸರಣೆಯಿಂದ ಪರಿಪೂರ್ಣ ವ್ಯಕ್ತಿತ್ವ ಸಾಧ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕೆ. ಪ್ರೇಮಾ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದದಲ್ಲಿ ಶ್ರೀಮಠ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ಸೆ. ೫ ರಿಂದ ೯ರವರೆಗೆ ಹಮ್ಮಿಕೊಂಡಿರುವ ಶರಣ ಶ್ರವಣ ಎಂಬ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಶರಣರ ವಚನಗಳ ಸ್ಮರಣೆಯಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯಲು ಸಾಧ್ಯ. ಅವುಗಳು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯುತ್ತವೆ. ಇಂದಿನ ಮಕ್ಕಳಿಗೆ ವಚನಗಳನ್ನು ಕಲಿಸುವುದು ಅಗತ್ಯವಿದೆ ಎಂದರು.

ಹೊಸಪೇಟೆಯ ನಿವೃತ್ತ ಪ್ರಾಚಾರ್ಯ ಡಿ.ಎಂ.ಮಲ್ಲಿಕಾರ್ಜುನಯ್ಯ ತಮ್ಮ ಪ್ರವಚನದಲ್ಲಿ ಸಮ್ಯಕ್ ಜ್ಞಾನ ಸರ್ಪಭೂಷಣ ಶಿವಯೋಗಿಗಳ ಜನನ, ಬಾಲ್ಯ, ಶಿಕ್ಷಣ, ದೇಶ ಸಂಚಾರ, ಸಾಹಿತ್ಯ ಕೃತಿಗಳ ಕುರಿತು ತಿಳಿಸಿ, ಮಹಾಜ್ಞಾನಿಗಳಾಗಿದ್ದ ಸರ್ಪಭೂಷಣ ಶಿವಯೋಗಿಗಳು ಕೈವಲ್ಯ ಕಲ್ಪವಲ್ಲರಿ ಎಂಬ ಕೃತಿ ರಚಿಸಿ, ಆಧ್ಯಾತ್ಮಿಕ ಜ್ಞಾನ ತಿಳಿಸಿಕೊಟ್ಟರು. ದೇಶ ಸಂಚಾರ ಮಾಡಿ ಅನುಭಾವಿಗಳಾದರು. ಜಾತಿಭೇದ ವಿರೋಧಿಸಿದ್ದಲ್ಲದೆ, ಮನುಷ್ಯರನ್ನು ಮಹಾತ್ಮರನ್ನಾಗಿಸಲು ಶ್ರಮಿಸಿದರು ಎಂದರು.

ಪ್ರಸಾದದ ಸೇವೆ ಕೈಗೊಂಡಿದ್ದ ಪತ್ರಕರ್ತ ಅರಳಿ ಕುಮಾರಸ್ವಾಮಿ ಮಾತನಾಡಿ, ಪ್ರಭುಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬೈಲುವದ್ದಿಗೇರಿಯ ಡಿ.ಎಂ.ರ‍್ರಿಸ್ವಾಮಿ ಗವಾಯಿಗಳು ಪುರಾಠ ಪಠಣ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕುಡುತಿನಿಯ ಡಿ.ತಿಪ್ಪೇಸ್ವಾಮಿ ತಬಲಾ ಸಾಥ್ ನೀಡಿದರು. ಶ್ರೀಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ಸರೋಜ ಪ್ರಕಾಶ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲ ಬಸವರಾಜ ಗೋನಾಳ ಸ್ವಾಗತಿಸಿದರು. ವಿದ್ಯಾ ಶಶಿಧರ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ತೆಕ್ಕಲಕೋಟೆ ವಂದಿಸಿದರು.

ಅಕ್ಕನ ಬಳಗದ ಗೌರವಾಧ್ಯಕ್ಷೆ ಶಾಂತಮ್ಮ ಪ್ರಭುರಾಜ್ ಅಂಕಮನಾಳ್, ಹಿರಿಯ ಸಲಹಾ ಸಮಿತಿ ಸದಸ್ಯೆ ಚೆನ್ನಮ್ಮ ದೊರೇಗೌಡ್ರು, ಎಲ್.ವಸಂತಮ್ಮ ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡೆಕೋಟೆ, ಸರ್ವ ಸದಸ್ಯರು, ಮುಖಂಡ ಬಪ್ಪಕಾನ್ ಕುಮಾರಸ್ವಾಮಿ, ಹಗರಿ ಬಸವರಾಜಪ್ಪ, ಎಂ. ಚರಂತಯ್ಯ, ಗುಡೆಕೋಟೆ ನಾಗರಾಜ, ವೀರಯ್ಯಸ್ವಾಮಿ, ಚಂದ್ರಶೇಖರಪ್ಪ, ಮಂಗಾಪುರ ಈರಣ್ಣ, ವುಂತಕಲ್ ವೀರೇಶ್, ಹಗರಿ ಯೋಗೇಶ್, ಎಚ್. ಕೊಟ್ರಬಸಪ್ಪ ಮುಂತಾದವರು ಉಪಸ್ಥಿತರಿದ್ದರು.