ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ಸಾರ್ವಜನಿಕ ಆಡಳಿತದಲ್ಲಿ ನೌಕರರು ಕರ್ತವ್ಯ ಲೋಪಗದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಯಾವುದೇ ಫಲಾಪೇಕ್ಷೆಯಿಲ್ಲದೇ ಕರ್ತವ್ಯ ನಿರ್ವಹಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.ಶುಕ್ರವಾರ ಸಂಜೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ, ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ, ರೇಶ್ಮೆ, ಕೃಷಿ, ತೋಟಗಾರಿಕೆ, ನ್ಯಾಯಾಂಗ, ಜಿಲ್ಲಾ ಮತ್ತು ತಾಲೂಕು ಇತರೆ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಕರ್ತವ್ಯ ಲೋಪ ಎಸಗಿದಾಗ ಅದನ್ನು ಪರಿಶೀಲನೆ ಮಾಡಲು 1984ರಲ್ಲಿ ಸಮಿತಿ ರಚನೆಯಾಯಿತು. ದುರಾಡಳಿತವಾದಾಗ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಲೋಕಾಯುಕ್ತ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ. ಆ ನೋಟಿಸ್‌ಗೆ ಶೀಘ್ರಗತಿಯಲ್ಲಿ ಅಧಿಕಾರಿಗಳು ಉತ್ತರಿಸಬೇಕು. ಇಲ್ಲದಿದ್ದರೆ ಇಲಾಖೆ ವಿಚಾರಣೆಗಳನ್ನು ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕೊಡಲಾಗುತ್ತದೆ.ಇಲಾಖೆ ನಿಯಮಾವಳಿ ಪರಿಪಾಲನೆ ಹಾಗೂ ಕರ್ನಾಟಕ ಲೋಕಾಯುಕ್ತ ಕಾಯ್ದೆಗಳನ್ನು ಅನುಸರಿಸಿ ಸಾರ್ವಜನಿಕ ಸಮಸ್ಯೆಗಳಿಗೆ ಹೆಚ್ಚು ಒತ್ತು ಕೊಟ್ಟು ಅರ್ಜಿ ವಿಚಾರಣೆಯು ನ್ಯಾಯಾಲಯದಲ್ಲಿಯ ರೀತಿಯಲ್ಲಿ ಪ್ರಕ್ರಿಯೆ ಜರುಗುತ್ತವೆ. ಒಂದು ವೇಳೆ ಆರೋಪ ಸಾಬೀತಾದರೆ ಸಂಬಂಧಿತ ಅಧಿಕಾರಿಯ ಮೇಲೆ ವಾರ್ಷಿಕ ವೇತನ ಬಡ್ತಿ ಸ್ಥಗಿತ, ಬಡ್ತಿ ಕೊಡದಿರುವುದು, ಸೇವೆಯಿಂದ ವಜಾ ಮಾಡಲು ಅವಕಾಶವಿದೆ.
ಇದರಿಂದ ಹಣ ಹಾಗೂ ಸಮಯ ವ್ಯರ್ಥವಾಗುವುದಲ್ಲದೇ ಸರ್ಕಾರಿ ನೌಕರರ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ. ಆದಕಾರಣ ನೌಕರರು ತಮ್ಮ ನಡೆ-ನುಡಿಗಳಲ್ಲಿ ಪರಿವರ್ತನೆ ಮಾಡಿಕೊಂಡು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು.ದೂರುಗಳು ಸಾರ್ವಜನಿಕರಿಂದ ಬಂದಾಗ ಅವು ಸುಳ್ಳು ಎಂದು ಸಾಬೀತಾದರೆ ದೂರು ನೀಡಿರುವವರ ಮೇಲೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತರ ಅನುಮತಿ ತೆಗೆದುಕೊಂಡು ಸಂಬಂಧಪಟ್ಟ ನೌಕರ ಅಂತಹ ಸಾರ್ವಜನಿಕರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಅವಕಾಶವಿದೆ ಎಂದು ವಿವರಿಸಿದರು.
ಲೋಕಾಯುಕ್ತ ಕಾಯ್ದೆಗಳ ಕುರಿತು ಅಧಿಕಾರಿಗಳಿಗೆ ವಿವರಣೆ ನೀಡಿದರು ಸಾರ್ವಜನಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಒದಗಿಸಿ ಮಾಲ್ಯಯುತ ಹಾಗೂ ಮೌಲ್ಯಾಧಾರಿತ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಕರ್ತವ್ಯವಾಗಿದೆ ಎಂದರು.ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರಿಗೆ ಹಾಗೂ ನೌಕರರಿಗೆ ಉಪಯುಕ್ತವಾದ ವಿಚಾರಗಳನ್ನು ಈ ಲೋಕಾಯುಕ್ತ ಕಾಯ್ದೆ ಅರಿವು ಕಾರ್ಯಾಗಾರದಲ್ಲಿ ಕಂಡುಕೊಳ್ಳಬಹುದಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ಲೋಪ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಸಾರ್ವಜನಿಕರು ದೂರು ನೀಡಿದಲ್ಲಿ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಶಿಕ್ಷೆ ನೀಡುವ ಕಾರ್ಯ ಮಾಡಲಿದೆ. ನೌಕರರು ಪ್ರತಿ ದಿನ ಸರಿಯಾಗಿ ಕರ್ತವ್ಯ ನಿರ್ವಹಿಸಿ ಸಂತೃಪ್ತಿಯಿಂದ ಮನೆಗೆ ತೆರಳಬೇಕು. ದೈನಂದಿನ ಕರ್ತವ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನ ಅಧಿಕಾರಿಗಳು ನಿರಂತರವಾಗಿ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್ಪಿ ಬಿ.ಎಸ್. ನೇಮಗೌಡ, ಜಿಪಂ ಸಿಇಒ ಭರತ್ ಎಸ್., ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ಉಪನಿಬಂಧಕ ಅಮರನಾರಾಯಣ ಕೆ., ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿಎಂ ಪಾಟೀಲ, ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ವಾಗತಿಸಿದರು. ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ ವಂದಿಸಿದರು. ಬಸವರಾಜ ಗಿರಿತಿಮ್ಮಣ್ಣವರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.