ತನಿಖೆಯಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ: ಎಂ.ಎ. ಸಲೀಂ

| Published : Nov 05 2025, 01:30 AM IST

ತನಿಖೆಯಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ: ಎಂ.ಎ. ಸಲೀಂ
Share this Article
  • FB
  • TW
  • Linkdin
  • Email

ಸಾರಾಂಶ

ನೊಂದವರಿಗೆ ನೆರವು ಹಾಗೂ ಅಪರಾಧಿಗೆ ಶಿಕ್ಷೆ ಎಂಬ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸಿ. ಗುಣಮಟ್ಟದ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ, ನಿಮ್ಮ ಪಾತ್ರ ಬಹಳ ಮುಖ್ಯ. ತನಿಖೆಯಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೊಂದವರಿಗೆ ನೆರವು ಹಾಗೂ ಅಪರಾಧಿಗೆ ಶಿಕ್ಷೆ ಎಂಬ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸಿ. ಗುಣಮಟ್ಟದ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ, ನಿಮ್ಮ ಪಾತ್ರ ಬಹಳ ಮುಖ್ಯ. ತನಿಖೆಯಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಸೂಚನೆ ನೀಡಿದರು.

ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಮರ್ಶನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕರ್ತವ್ಯದ ಬಗ್ಗೆ ಶ್ರದ್ಧೆಯಿರಲಿ. ಗುಣಮಟ್ಟದ ತನಿಖೆಯಿಂದ ಮಾತ್ರ ಶಿಕ್ಷೆಯ ಪ್ರಮಾಣ ಹಾಗೂ ಕಾನೂನುಬಾಹಿರ ಕೃತ್ಯ ಎಸಗುವ ಗುಂಪುಗಳು, ರೌಡಿ ಆಸಾಮಿಗಳಿಗೆ ಶಿಕ್ಷೆ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಉಪಟಳ ನೀಡುವವರ ವಿರುದ್ಧ ಕ್ರಮ ಕೈಗೊಂಡಂತೆಯೂ ಆಗುತ್ತದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ಪ್ರಾಥಮಿಕ ಮತ್ತು ನಿಜವಾದ ಕೆಲಸವೆಂದರೆ, ಕಾನೂನು-ಸುವ್ಯವಸ್ಥೆ ಕಾಪಾಡುವುದಾಗಿದೆ. ಜೊತೆಗೆ ನೊಂದವರಿಗೆ ನೆರವು, ಸಾರ್ವಜನಿಕರ ಸೇವೆಗೆ ಸದಾ ಲಭ್ಯವಿರುವುದು, ಸಮುದಾಯದತ್ತ ಇಲಾಖೆಯನ್ನು ಕೊಂಡೊಯ್ಯುವುದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದು ಹಾಗೂ ತಡೆಯುವುದು ಎಂದು ತಿಳಿಸಿದರು.

ಗಾಂಜಾ ಮಟ್ಟ ಹಾಕಿ: ಮಾದಕ ದ್ರವ್ಯದ ಕುರಿತು ತಳಮಟ್ಟದ ಮಾಹಿತಿಯನ್ನು ಸಂಗ್ರಹಿಸಿ. ಗಾಂಜಾ ಬೆಳೆಯುವವರು, ಸೇವನೆ ಮಾಡುವವರು, ಮಾರಾಟ ಮಾಡುವವರು, ಸಂಗ್ರಹಣೆ ಮಾಡುವವರು ಮತ್ತು ಸಾಗಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ. ಕಾನೂನು ರೀತಿಯ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರು ಇಟ್ಟಿರುವಂತಹ ನಂಬಿಕೆಯ ಮೇಲೆ, ಇಲಾಖೆಯ ಯಶಸ್ಸು ನಿಂತಿರುತ್ತದೆ. ಆದ್ದರಿಂದ ನೀವು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಾನೂನು ವ್ಯಾಪ್ತಿಗೆ ಒಳಪಟ್ಟು ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಶಿವಮೊಗ್ಗ ಪೊಲೀಸ್ ಇಲಾಖೆ ಬಗ್ಗೆ ಮೆಚ್ಚುಗೆ: ಶಿವಮೊಗ್ಗ ಜಿಲ್ಲೆ ಒಂದು ಸೂಕ್ಷ್ಮ ಜಿಲ್ಲೆಯಾಗಿದೆ. ಪೊಲೀಸ್ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ, ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದೆ. ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ಕೃತ್ಯಗಳು, ಇತರೆ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಮಟ್ಟ ಹಾಕುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಜಿಲ್ಲೆಯ ಪೊಲೀಸರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇ ಗೌಡ, ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

---

ಪ್ರಕರಣಗಳ ಮಹಜರುಗಳನ್ನು ನಡೆಸುವಾಗ ಮತ್ತು ಸಾಕ್ಷಿದಾರರುಗಳನ್ನು ಆಯ್ದುಕೊಳ್ಳುವಾಗ, ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರಿ ಸಾಕ್ಷಿದಾರರನ್ನು ಆಯ್ದುಕೊಳ್ಳಬೇಕು. ಇಂತಹ ನಡೆಯಿಂದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವು ಹೆಚ್ಚಾಗುತ್ತದೆ. ಯಾವುದೇ ತನಿಖೆ ಹಾಗೂ ಇತರ ಇಲಾಖೆಗಳೊಂದಿಗೆ ವ್ಯವಹರಿಸುವಾಗ, ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ. ಆಗ ಮಾತ್ರ ನೀವು ಮಾಡಿದಂತಹ ಕೆಲಸಕ್ಕೆ ಸೂಕ್ತ ನ್ಯಾಯ ದೊರಕಿಸಿದಂತಾಗುತ್ತದೆ.

ಎಂ.ಎ. ಸಲೀಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು