ಸರ್ವಾಧ್ಯಕ್ಷರ ಮೆರವಣಿಗೆಗೆ ಕಲಾತಂಡಗಳ ಮೆರುಗು

| Published : Dec 20 2024, 12:46 AM IST

ಸಾರಾಂಶ

ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುವುದಕ್ಕಾಗಿ ವಿಶೇಷ ರಥವೊಂದನ್ನು ನಿರ್ಮಿಸಲಾಗಿದೆ. ಅವರೊಂದಿಗೆ ೮೦೦ ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಸಾಗುವರು. ೧೫೪ ಹೊರರಾಜ್ಯ, ಹೊರಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಜಾನಪದ ಕಲಾತಂಡಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುರುವಾರ ಬೆಳಗ್ಗೆ ಆಯೋಜನೆಗೊಂಡಿರುವ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ನೂರಾರು ಜಾನಪದ ಕಲಾತಂಡಗಳು ಮೆರುಗು ನೀಡಲಿವೆ.

ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುವುದಕ್ಕಾಗಿ ವಿಶೇಷ ರಥವೊಂದನ್ನು ನಿರ್ಮಿಸಲಾಗಿದೆ. ಅವರೊಂದಿಗೆ ೮೦೦ ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಸಾಗುವರು. ೧೫೪ ಹೊರರಾಜ್ಯ, ಹೊರಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಜಾನಪದ ಕಲಾತಂಡಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಲಿವೆ.

ಬೆಳಗ್ಗೆ ೭ ಗಂಟೆಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಮೆರವಣಿಗೆ ಹೊರಡಲಿದ್ದು, ೧೦ ಗಂಟೆಗೆ ಸಮ್ಮೇಳನ ನಡೆಯಲಿರುವ ಸ್ಥಳವನ್ನು ತಲುಪಲಿದೆ.

ಮೆರವಣಿಗೆಯಲ್ಲಿ ತಮಿಳುನಾಡಿನ ಕರಗಂ, ಮಧ್ಯಪ್ರದೇಶದ ಬುಡಕಟ್ಟು ನೃತ್ಯ, ಬಧಾಯಿ ಮತ್ತು ನೋರಾ, ಒಡಿಸ್ಸಾದ ಸಂಬಲ್ಪುರಿ ಮತ್ತು ಧಾಪ್ ಬುಡಕಟ್ಟು ನೃತ್ಯ ಆಕರ್ಷಿಸಲಿವೆ. ಚಿಕ್ಕಮಗಳೂರಿನ ಮಹಿಳಾ ವೀರಗಾಸೆ, ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ, ಧಾರವಾಡದ ಜಗ್ಗಲಿಗೆ ಮೇಳ, ರಾಮನಗರ ಪಟ ಕುಣಿತ, ಹಾವೇರಿಯ ಛತ್ರಿ ಛಾಮರ, ಮಹಿಳಾ ಡೊಳ್ಳು ಕುಣಿತ, ಬೆಂಗಳೂರಿನ ಅಶ್ವರೋಹಿ ದಳ, ಬಾಗಲಕೋಟೆಯ ಮುಳ್ಳು ಕುಣಿತ, ಬಳ್ಳಾರಿಯ ಹಗಲುವೇಷ, ಚಿಕ್ಕಬಳ್ಳಾಪುರದ ಅರೆವಾದ್ಯ, ಚಿತ್‌ರದುರ್ಗದ ಖಾಸಬೇಡರ ಪಡೆ, ಹಾಸನದ ಚಿಟ್ಟಿಮೇಳ, ಚಾಮರಾಜನಗರದ ಗೊರವರ ಕುಣಿತ, ದಾವಣಗೆರೆಯ ಲಂಬಾಣಿ ನೃತ್ಯ, ಕಲಬುರಗಿ ಚಿಟ್ಟಲಗಿ ಮೇಳ, ಹಾಸನದ ಕೋಳಾಟ, ಬೆಂಗಳೂರಿನ ಕೋಳಿ ನೃತ್ಯ, ಮೈಸೂರಿನ ಕಂಸಾಳೆ, ಯಾದಗಿರಿಯ ಷಯನಾಯವಾದನ, ಕೊಡಗಿನ ಕೊಡವರ ನೃತ್ಯ, ಶಿವಮೊಗ್ಗದ ದೇವಿ ವೇಷಧಾರಿ, ರಾಂನಗರದ ಮಹಿಳಾ ಚಂಡೆ ಸೇರಿದಂತೆ ಮಂಡ್ಯ ಜಿಲ್ಲೆಯ ಜಾನಪದ ಕಲಾತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಲಿವೆ.