ಕನ್ನಡಪ್ರಭ ವಾರ್ತೆ ತಾಳಿಕೋಟೆ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ವ್ಯಕ್ತಿಯು ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಪೊಲೀಸ್ ಸಿಬ್ಬಂದಿ ಹಗಲು-ರಾತ್ರಿ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ತವ್ಯದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ರೋಟರಿಯನ್ ಡಾ.ವ್ಹಿ.ಎಸ್.ಕಾರ್ಚಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ವ್ಯಕ್ತಿಯು ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಪೊಲೀಸ್ ಸಿಬ್ಬಂದಿ ಹಗಲು-ರಾತ್ರಿ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ತವ್ಯದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ರೋಟರಿಯನ್ ಡಾ.ವ್ಹಿ.ಎಸ್.ಕಾರ್ಚಿ ಹೇಳಿದರು.

ತಾಳಿಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಪೊಲೀಸ್‌ ಸಿಬ್ಬಂದಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆಗೆ ಉತ್ತಮ ಆಹಾರ ಪದ್ಧತಿ, ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಬೇಕು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕೆಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಅವರು ತಿಳಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಘನಶಾಮ ಚವ್ಹಾಣ ಹಾಗೂ ಡಾ.ಎ.ಎ.ನಾಲಬಂದ ಮಾತನಾಡಿ, ಸಮಾಜ ಸೇವೆಯ ಭಾಗವಾಗಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು ರೋಟರಿ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಪೊಲೀಸ್ ಸಿಬ್ಬಂದಿ ದಿನನಿತ್ಯ ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ತಾಳಿಕೋಟೆ ಪೊಲೀಸ್ ಠಾಣೆಯ ೬೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪಿಎಸ್‌ಐ ಜ್ಯೋತಿ ಖೋತ್ ಮಾತನಾಡಿದರು. ರೋಟರಿಯನ್ ಡಾ.ಆನಂದ ಭಟ್, ಡಾ.ಎ.ಎನ್.ನಾಲಬಂದ, ಅಶೋಕ ಬಳಗಾನೂರ, ಪ್ರಭುಗೌಡ ಮದರಕಲ್ಲ, ಚಿನ್ನಪ್ಪಗೌಡ ಮಾಳಿ, ಮಲ್ಲಿಕಾರ್ಜುನ ಕತ್ತಿ, ಮುರುಗೆಪ್ಪ ಸರಶೆಟ್ಟಿ, ರಾಜು ಸಜ್ಜನ, ಮಲ್ಲಿಕಾರ್ಜುನ ನಾಗರಾಳ, ಶ್ರೀನಿವಾಸ ಸೋನಾರ, ಶಾಮ ಹಂಚಾಟೆ, ಸಂಜೀವ ಹೇರಿ, ಬಸವರಾಜ ಕುಂಬಾರ, ಸುಭಾಸ ಬಬಲೇಶ್ವರ, ಪಿಎಸ್‌ಐ ಎಸ್.ಎಂ.ಪಡಶೆಟ್ಟಿ, ಪ್ರಸೂತಿ ತಜ್ಞ ಡಾ.ಗಂಗಾಂಬಿಕಾ ಪಾಟೀಲ, ಡಾ.ಶಾಂತಾ ಇಬ್ರಾಹಿಂಪುರ, ದಂತ ವೈದ್ಯ ಡಾ.ಜಾಕೀರ ಅಹ್ಮದ್ ಸೇರಿ ವೈದ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು ಹಾಗೂ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ರೋಟರಿಯನ್ ಅಶೋಕ ಬಳಗಾನೂರ ನಿರೂಪಿಸಿದರು.