ಪೆರಿಫೆರಲ್‌ ರಸ್ತೆ: 2013ರ ಕಾಯ್ದೆ ಆಡಿ ಪರಿಹಾರಕ್ಕೆ ನಾಡಿದ್ದು ಧರಣಿ

| Published : Feb 07 2024, 01:50 AM IST

ಪೆರಿಫೆರಲ್‌ ರಸ್ತೆ: 2013ರ ಕಾಯ್ದೆ ಆಡಿ ಪರಿಹಾರಕ್ಕೆ ನಾಡಿದ್ದು ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ಕರೆದಿರುವ ಟೆಂಡರ್‌ ತಡೆಹಿಡಿಯಬೇಕು, ರೈತರು ಹಾಗೂ ನಿವೇಶನದಾರರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ, ಪುನರ್ವಸತಿ ನೀಡಬೇಕು ಎಂದು ಆಗ್ರಹಿಸಿ ಫೆ. 9ರಂದು ಬಿಡಿಎ ಕಚೇರಿ ಎದುರು ಪ್ರತಿಭಟಿಸಲು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ಕರೆದಿರುವ ಟೆಂಡರ್‌ ತಡೆಹಿಡಿಯಬೇಕು ಹಾಗೂ ರೈತರು ಹಾಗೂ ನಿವೇಶನದಾರರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ, ಪುನರ್ವಸತಿ ನೀಡಬೇಕು ಎಂದು ಆಗ್ರಹಿಸಿ ಫೆ.9ರಂದು ಬಿಡಿಎ ಕಚೇರಿ ಎದುರು ಪ್ರತಿಭಟಿಸಲು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ಮುಂದಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾವಳಿಪುರ ಶ್ರೀನಿವಾಸ್, 65 ಕಿಮೀ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ 1810 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು 2005ರಲ್ಲಿ ಪ್ರಾಥಮಿಕ ಅಧಿಸೂಚನೆ, 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದೀಗ 19 ವರ್ಷದ ಬಳಿಕ 2024ರ ಜ.25ರಂದು ಫೆರಿಫೆರಲ್‌ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಆದರೆ, ಬಿಡಿಎ 1984ರ ಭೂಸ್ವಾಧೀನ ಕಾಯ್ದೆಯಡಿ ಭೂಸ್ವಾಧೀನ ಪರಿಹಾರ ನೀಡುವುದಾಗಿ ಹೇಳುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1894ರ ಕಾಯ್ದೆ ಪ್ರಕಾರ ಈಗಿನ ಭೂಮೌಲ್ಯದ ಪ್ರಕಾರ ಶೇ.30 ಸಾಲ್ಯೂಶಮ್‌ ಸೇರಿ ಬಡ್ಡಿ ಶೇ.42ರಷ್ಟು ಸಿಗುತ್ತದೆ. 2013ರ ಭೂಸ್ವಾಧೀನ ಕಾಯ್ದೆಯಂತೆ ಗ್ರಾಮಾಂತರ ಪ್ರದೇಶದಲ್ಲಿ ಭೂಮಿಯ ಮೌಲ್ಯದ 3 ಪಟ್ಟು ಹಾಗೂ ನಗರ ಪ್ರದೇಶದಲ್ಲಿ 2 ಪಟ್ಟು, ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ, ಮಾನವೀಯ ನೆಲೆಯಲ್ಲಿ ಪುನಶ್ಚೇತನ ಮತ್ತು ಪುನರ್ವಸತಿ ಕಲ್ಪಿಸುತ್ತದೆ. ಇದರಿಂದ ರೈತರು, ಜನತೆಗೆ ಅನುಕೂಲವಾಗಲಿದೆ ಎಂದರು.

ಇದಲ್ಲದೆ, ರಾಜ್ಯದಲ್ಲಿ ಕೆಐಎಡಿಬಿ, ಕೆಎಚ್‌ಬಿ, ಎನ್‌ಎಚ್‌ಎಐ 2013ರ ಕಾಯ್ದೆಯಂತೆ ರೈತರಿಗೆ ಪರಿಹಾರ ನೀಡುತ್ತಿವೆ. ಆದರೆ, ಬಿಡಿಎ ಹಿಂದಿನ ಕಾಯ್ದೆ ಅನುಸಾರ ಪುಡಿಗಾಸು ಪರಿಹಾರ ನೀಡಲು ಮುಂದಾಗಿರುವುದು ಸರಿಯಲ್ಲ. ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ 65 ರೈತರು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದ ಪ್ರಕರಣ ಹೈಕೋರ್ಟ್‌ಗೆ ವರ್ಗಾವಣೆಯಾಗಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಬಿಡಿಎ ಏಕಾಏಕಿ ಕಾಮಗಾರಿ ಟೆಂಡರ್‌ ಕರೆದಿರುವುದು ಸರಿಯಲ್ಲ. ಹೀಗಾಗಿ ತಕ್ಷಣ ಟೆಂಡರ್‌ ತಡೆಹಿಡಿದು ಪರಿಹಾರದ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಬೇಕು. ಇದಕ್ಕಾಗಿ ಬಿಡಿಎ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.