ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಲ್ಲಿ ಭಾರೀ ಲೂಟಿ..!

| Published : Mar 15 2025, 01:01 AM IST

ಸಾರಾಂಶ

ರಾಜ್ಯದೆಲ್ಲೆಡೆ ಸರ್ಕಾರದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರಗಳು ಆರಂಭವಾಗಿದ್ದು, ಪಿರಿಯಾಪಟ್ಟಣದ ಕೇಂದ್ರಗಳು ಮಾಫಿಯಾ ಕೈಯಲ್ಲಿ ಸಿಲುಕಿರುವುದು ವಿಪರ್ಯಾಸವಾಗಿದೆ. ರೈತರ ಉದ್ಧಾರಕ್ಕಾಗಿ ರಾಜ್ಯ ಸರ್ಕಾರದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಸರ್ಕಾರದ ದೃಷ್ಟಿಯಲ್ಲಿ ಇದು ರೈತರ ಕಲ್ಯಾಣಕೆಂದೇ ಸ್ಥಾಪಿತವಾಗಿರುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಸರ್ಕಾರ ಎಚ್ಚೆತ್ತು ರಾಗಿ ಖರೀದಿ ಕೇಂದ್ರಕ್ಕೆ ಉತ್ತಮ ಸರ್ಕಾರಿ ಅಧಿಕಾರಿಗಳನ್ನು ಹಾಗೂ ಉತ್ತಮ ರೈತ ಸ್ನೇಹಿ ಲೋಡರ್ಸ್ ಗುತ್ತಿಗೆದಾರರನ್ನು ನೇಮಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದೆಲ್ಲೆಡೆ ಸರ್ಕಾರದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರಗಳು ಆರಂಭವಾಗಿದ್ದು, ಈ ಕೇಂದ್ರಗಳು ಮಾಫಿಯಾ ಕೈಯಲ್ಲಿ ಸಿಲುಕಿರುವುದು ವಿಪರ್ಯಾಸವಾಗಿದೆ.

ರೈತರ ಉದ್ಧಾರಕ್ಕಾಗಿ ರಾಜ್ಯ ಸರ್ಕಾರದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಸರ್ಕಾರದ ದೃಷ್ಟಿಯಲ್ಲಿ ಇದು ರೈತರ ಕಲ್ಯಾಣಕೆಂದೇ ಸ್ಥಾಪಿತವಾಗಿರುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ.

ಆದರೆ, ಖರೀದಿ ಕೇಂದ್ರಗಳು ರೈತರ ಶೋಷಣೆಗೆ ನಿಂತಿರುವುದು ಕಂಡು ಬರುತ್ತದೆ, ಇಂದಿನ ವರ್ಷಗಳಲ್ಲಿ ಖರೀದಿ ಕೇಂದ್ರಗಳಲ್ಲಿ ಸರ್ಕಾರಿ ಅಧಿಕಾರಿಗಳು ಇರುತ್ತಿದ್ದರು, ಅವರಿಗೆ ಜವಾಬ್ದಾರಿ ಇರುತ್ತಿತ್ತು ಹಾಗೂ ಸಾರ್ವಜನಿಕರ ಭಯ ಇತ್ತು. ಆದರೆ, ಬದಲಾದ ಸರ್ಕಾರದ ನಿರ್ಣಯದಿಂದಾಗಿ ಖಾಸಗಿ ಏಜೆನ್ಸಿ ಅವರಿಗೆ ಖರೀದಿ ಪ್ರಕ್ರಿಯೆ ನೀಡಿದ್ದು, ಅವರಿಗೆ ಯಾವುದೇ ಅಡೆತಡೆ ಇಲ್ಲದೆ ದುಡ್ಡು ಮಾಡುವ ದಂಧೆ ಮಾಡಿಕೊಂಡಿದ್ದಾರೆ, ಅವರಿಗೆ ಸ್ಥಳೀಯ ವರ್ತಕರು ಹಾಗೂ ರಾಜಕೀಯ ಮುಖಂಡರ ಗುಂಪು ಬೆಂಬಲವಾಗಿರುತ್ತದೆ. ರೈತರ ರಾಗಿಗಿಂತ ಹೆಚ್ಚಾಗಿ ವರ್ತಕರ ರಾಗಿಯು ಈ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ.

ರೈತರು ಮಾರುಕಟ್ಟೆಗೆ ತಮ್ಮ ರಾಗಿಯನ್ನು ಮಾರಾಟ ಮಾಡಲು ತಂದರೆ ನಿಮ್ಮ ರಾಗಿಯಲ್ಲಿ ತೇವಾಂಶ ಹೆಚ್ಚಾಗಿದೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸಬೂಬು ಹೇಳುವ ಖರೀದಿ ಅಧಿಕಾರಿ, ಚೀಲವೊಂದಕ್ಕೆ 5 ಕೆಜಿ ಕಳೆಯುತ್ತಾರೆ, ಕೆಜಿ ಒಂದಕ್ಕೆ 450 ರಂತೆ 20 ಕ್ವಿಂಟಲ್‌ ಗೆ 9 ಸಾವಿರ ರು. ಆಯ್ತು ಒಬ್ಬ ರೈತನಿಂದ 9 ಸಾವಿರವಾದರೆ ಒಂದು ಲಕ್ಷ ರೈತರು ಒಂದು ಖರೀದಿ ಕೇಂದ್ರದಲ್ಲಿ ನೋಂದಾಯಿಸಿರುತ್ತಾರೆ. ಹೀಗೆ ಕೋಟ್ಯಂತರ ರು. ಹಣ ಮಾಡುತ್ತಿರುವ ಏಜೆನ್ಸಿಗಳು ಮತ್ತೊಂದು ಕಡೆ ಲೋಡರ್ಸ್ ಮಾಫಿಯಾ ಲೋಡರ್ಸ್ ಗಳು ಗಾಡಿ ಒಂದನ್ನು ಅನ್ ಲೋಡ್ ಮಾಡಲು 5 ಸಾವಿರ ಫಿಕ್ಸ್ ಮಾಡಿದ್ದಾರೆ.

ರೈತ ಹಣ ನೀಡದಿದ್ದರೆ ರಾಗಿ ಖರೀದಿ ಆಗದೆ ಹಾಗೆ ಉಳಿದುಕೊಳ್ಳುತ್ತದೆ. ವಿಧಿ ಇಲ್ಲದ ರೈತರು ಲೋಡರ್ಸ್ ಗಳಿಗೆ ಹಣ ನೀಡುತ್ತಾರೆ, ಎಲ್ಲೋ ರಾಜಧಾನಿಯಲ್ಲಿ ಕುಳಿತುಕೊಂಡು ಲೋಡರ್ಸ್ ಕಂಟ್ರಾಕ್ಟ್ ಪಡೆಯುವ ವ್ಯಕ್ತಿ ಲೋಡರ್ಸ್‌ಗಳಿಗೆ ಹಣ ನೀಡುವುದಿಲ್ಲ ಬದಲಾಗಿ ನೀವು ರೈತರೆ ಪಡೆದುಕೊಳ್ಳಿ ಎಂದು ಹೇಳಿ ಪುಕ್ಕಟೆಯಾಗಿ ಲಕ್ಷಗಟ್ಟಲೆ ದುಡ್ಡು ಹೊಡೆಯುತ್ತಾರೆ, ಇದು ಒಂದು ಮಾಫಿಯಾ ಕಳೆದ ವರ್ಷ ಪಿರಿಯಾಪಟ್ಟಣ ತಾಲೂಕಿನಲ್ಲಿ ಇದೇ ರೀತಿ ರೈತರು ಲೋಡರ್ಸ್ ಗಳಿಗೆ ಹಣ ಕೊಡುವ ವಿಚಾರವಾಗಿ ರೈತನೊಬ್ಬ ಹೆಚ್ಚು ಹಣ ಕೊಡುವುದಿಲ್ಲ ಎಂದು ಹೇಳಿದಾಗ ಲೋಡರ್ಸ್ ಗಳು ಬಡ ರೈತನನ್ನು ಅಟ್ಟಾಡಿಸಿಕೊಂಡು ಚಾಕುವಿನಿಂದ ಹಲ್ಲೆ ಮಾಡಿದ್ದರು. ಆ ಘಟನೆ ನಂತರ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿದರಾದರು ಆತ ಬೇರೆಯವರ ಹೆಸರಿನಲ್ಲಿ ಕಂಟ್ರಾಕ್ಟ್ ಪಡೆದು ಮತ್ತೆ ಪುನಃ ಈ ವರ್ಷವೂ ಕೂಡ ಲೋಡರ್ಸ್ ಗುತ್ತಿಗೆ ಪಡೆದಿರುವುದು ರೈತರ ವಿಪರ್ಯಾಸವೇ ಸರಿ.