ಹೊರಗುತ್ತಿಗೆ ಪೌರಕಾರ್ಮಿಕರ ಕಾಯಂಗೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್

| Published : Sep 25 2024, 12:46 AM IST

ಹೊರಗುತ್ತಿಗೆ ಪೌರಕಾರ್ಮಿಕರ ಕಾಯಂಗೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ವಹಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ರಾಮನಗರದಲ್ಲಿ ಪೌರಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.

ಪೌರಕಾರ್ಮಿಕರ ದಿನ । ನಿವೇಶನಕ್ಕೆ 13 ಸಾವಿರ ಅರ್ಜಿ । 8880 ಅರ್ಜಿ ಅಂತಿಮಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ವಹಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಸಭೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಯಾವ ಸರ್ಕಾರಗಳು ಪೌರ ಕಾರ್ಮಿಕರ ಬಗ್ಗೆ ಗಮನ ಹರಿಸಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಪೌರಕಾರ್ಮಿಕರನ್ನು ಕಾಯಂ ಮಾಡಿತು. ಈಗ 106 ಕಾಯಂ ಪೌರಕಾರ್ಮಿಕರು ಇದ್ದು, ಉಳಿದವರ ಕಾಯಂಗೊಳಿಸಲು ಕ್ರಮ ವಹಿಸುತ್ತೇವೆ ಎಂದರು. ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ತಂಗುದಾಣ ವ್ಯವಸ್ಥೆ, ನಿವೇಶನ, ಮನೆ ನಿರ್ಮಿಸಿ ಕೊಡುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ಈಗಾಗಲೇ 80 ಎಕರೆ ಜಾಗ ಗುರುತಿಸಿದ್ದೇವೆ. ನಿವೇಶನ ಕೋರಿ 13 ಸಾವಿರ ಅರ್ಜಿಗಳು ಬಂದಿದ್ದು, ಅದರಲ್ಲಿ 8880 ಅರ್ಜಿ ಅಂತಿಮ ಗೊಳಿಸಿದ್ದೇವೆ. 3 ತಿಂಗಳಲ್ಲಿ 3 ಸಾವಿರ ನಿವೇಶನ ಕೊಡುತ್ತೇವೆ. ಈ ಹಿಂದೆ ಸೂರು ಕಲ್ಪಿಸುವುದಾಗಿ ಜನರಿಂದ ₹5000 ಪಡೆದವರು ಕಾಣೆಯಾಗಿದ್ದಾರೆ ಎಂದು ಹೇಳಿದರು.

ಕೋಳಿ ತ್ಯಾಜ್ಯಕ್ಕೆ ಕಡಿವಾಣ ಹಾಕಬೇಕು:

ಅರ್ಕಾವತಿ ನದಿಯಲ್ಲಿ ಕೋಳಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಸ ಹಾಕುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಬೇಕು. ಆರೋಗ್ಯ ಪೂರ್ಣ ನಿರ್ಮಾಣದಲ್ಲಿ ಪೌರಕಾರ್ಮಿಕರು ಮಾತ್ರವಲ್ಲದೆ ಜನಸಾಮಾನ್ಯರಲ್ಲೂ ಸ್ವಚ್ಛತೆ ಭಾವನೆ ಮೂಡಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿ, ವಿದೇಶಗಳಲ್ಲಿ ಅಧ್ಯಕ್ಷ ಮತ್ತು ಪೌರಕಾರ್ಮಿಕರು ಇಬ್ಬರೂ ಸರಿಸಮಾನರು. ಆದರೆ, ನಮ್ಮ ಸಮಾಜದಲ್ಲಿ ಇಂದಿಗೂ ಮೇಲು ಕೀಳೆಂಬ ವ್ಯತ್ಯಾಸಗಳಿವೆ. ಇದು ತೊಲಗಬೇಕಾದರೆ ಪೌರಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ನಿಮಗೆ ಸವಲತ್ತುಗಳನ್ನು ಕಲ್ಪಿಸಿದಾಗ ಮಾತ್ರ ನಮ್ಮಂತಹ ಅಧಿಕಾರಿಗಳಿಗೂ ಸಮಾಧಾನ ಆಗುತ್ತದೆ ಎಂದರು.ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪೌರಕಾರ್ಮಿಕರ ಮಕ್ಕಳ ಶುಲ್ಕ ಕಡಿಮೆ ಮಾಡುವ ಸಂಬಂಧ ಆ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರೊಂದಿಗೆ ಚರ್ಚೆ ನಡೆಸುತ್ತೇನೆ. ಈಗಿರುವ 105 ಪೌರಕಾರ್ಮಿಕರ ಪೈಕಿ 61 ಮಂದಿಗೆ ನಿವೇಶನ ಇಲ್ಲ. 4 ಎಕರೆ ಜಾಗ ಗುರುತಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.ಪೌರ ಕಾರ್ಮಿಕರು ಅನಾರೋಗ್ಯಪೀಡಿತರಾಗುತ್ತಲೇ ಇದ್ದು, ಅವರು ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿದಲ್ಲಿ 5 ಲಕ್ಷ ರು.ವರೆಗೆ ಕ್ಯಾಶ್ ಲೆಸ್ ಟ್ರೀಟ್ ಮೆಂಟ್ ಸಿಗಲಿದೆ. ಪೌರಕಾರ್ಮಿಕರು ದುಶ್ಚಟಗಳ ದಾಸರಾಗದೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.ಅತ್ಯುತ್ತಮ ಸೇವೆ ಸಲ್ಲಿಸಿರುವ ಪೌರ ಕಾರ್ಮಿಕರು, ನೀರು ಸರಬರಾಜು ಒಳ ಚರಂಡಿ ಮಂಡಳಿಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಕೆ.ರಾಜು, ಹೊರಗುತ್ತಿಗೆ ನೌಕರರ ಸಂಘ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಗಾಣಕಲ್ ನಟರಾಜ್, ಎ.ಬಿ.ಚೇತನ್ ಕುಮಾರ್, ವಿ.ಎಚ್. ರಾಜು, ಶಿವಕುಮಾರಸ್ವಾಮಿ, ವಿಜಯ ಕುಮಾರಿ, ಪಾರ್ವತಮ್ಮ, ಸೋಮಶೇಖರ್, ಅಜ್ಮತ್, ಮುತ್ತುರಾಜ್, ಪವಿತ್ರ, ಆಯಿಷಾ, ಮಂಜುನಾಥ್, ಜಯಲಕ್ಷ್ಮಮ್ಮ, ನಿಜಾಮುದ್ದೀನ್, ಫೈರೋಜ್, ಮಂಜುಳಾ ವೆಂಕಟೇಶ್, ಮಹಾಲಕ್ಷ್ಮಿ ಉಪಸ್ಥಿತರಿದ್ದರು. ನಾಲ್ವರು ಸಿಎಂ ಕುಡಿಯುವ ನೀರು ಕೊಡಲಿಲ್ಲರಾಮನಗರ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ನೀಡಿತು. ಆದರೆ, ಯಾರು ರಾಮನಗರ ಜನರಿಗೆ ಕುಡಿಯುವ ನೀರು ಕೊಡಲಿಲ್ಲ. ನಾವು ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಿದ್ದೇವೆ. ಅರ್ಕಾವತಿ ನದಿಯಲ್ಲಿ 167 ಕೋಟಿ ವೆಚ್ಚದಲ್ಲಿ ವಾಕ್ ಪಾತ್ ನಿರ್ಮಿಸುತ್ತೇವೆ. ನಗರದಲ್ಲಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ 100 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಪೌರಕಾರ್ಮಿಕರ ದಿನಾಚರಣೆ ಪೂಜಾ ಕಾರ್ಯಕ್ರಮವಿದ್ದಂತೆ, ನಾವು ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ದೇವರನ್ನು ಕಾಣಬಹುದು. ಪೌರ ಕಾರ್ಮಿಕರ ಕೆಲಸ ಸಮಾಜವಲ್ಲ, ದೇವರು ಕೂಡಾ ಮೆಚ್ಚುವ ಕಾರ್ಯ.

ಇಕ್ಬಾಲ್ ಹುಸೇನ್ ಶಾಸಕ ರಾಮನಗರ