ಕೆಂಭಾವಿಗೆ ಶಾಶ್ವತ ಕುಡಿಯುವ ನೀರು: ದರ್ಶನಾಪುರ

| Published : Mar 04 2024, 01:15 AM IST

ಸಾರಾಂಶ

ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಕೆಂಭಾವಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ನೂತನ ಪೈಪ್‌ಲೈನ್ ಕಾಮಗಾರಿ ಆರಂಭಗೊಳ್ಳಲಿದೆ

ಕನ್ನಡಪ್ರಭ ವಾರ್ತೆ ಸುರಪುರ

ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಕೆಂಭಾವಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ನೂತನ ಪೈಪ್‌ಲೈನ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕೆಂಭಾವಿ ವಲಯ ಮಟ್ಟದ ಜನತೆಯ ಅಹಲವಾಲು ಸ್ವೀಕಾರ ಮತ್ತು ವಿವಿಧ ಸರ್ಕಾರಿ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಂಭಾವಿ ವಲಯದ ಮಾಳಹಳ್ಳಿ, ನಡಕೂರ, ಆಲ್ಹಾಳ, ಚಿಂಚೋಳಿ, ಯಾಳಗಿ, ಮಲ್ಲಾ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಯ ವಿವಿಧ ಯೋಜನೆಯಡಿಯಲ್ಲಿ ಹಣ ಒದಗಿಸಲಾಗಿದೆ ಹಾಗೂ ಪಟ್ಟಣದಲ್ಲಿ 440 ಕೆವಿ ವಿದ್ಯುತ್ ಘಟಕ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರ ಹಿತಕಾಪಾಡಲು ಸಿದ್ಧವಿದೆ. ಉಚಿತ ವಿದ್ಯುತ್, ಗೃಹಲಕ್ಷ್ಮಿ, ಬಸ್ ಪ್ರಯಾಣ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೊಂಡಿವೆ ಎಂದು ತಿಳಿಸಿದರು.

ಚುನಾವಣಾ ಸಮಯದಲ್ಲಿ ರಾಜ್ಯದ ಜನರಿಗೆ ಪಕ್ಷ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಂಡಿದ್ದು, ರಾಜ್ಯದಲ್ಲಿ ಅಕ್ಕಿ ಕೊರತೆಯಿಂದ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಸಹಕಾರ ಸಂಘಗಳ ಮೂಲಕ ರೈತರಿಗೆ ಇಲ್ಲಿಯವರೆಗೂ ಸುಮಾರು 300 ಕೋಟಿ ರು.ಗಳಿಗೂ ಅಧಿಕ ಸಾಲವನ್ನು ನೀಡಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ, ಉಪ ತಹಸೀಲ್ದಾರ ಅವರ ಕಚೇರಿ, ಅಂಗನವಾಡಿ ಕಟ್ಟಡ ಹಾಗೂ ಸಂಜೀವನಗರದಲ್ಲಿ ನಮ್ಮ ಕ್ಲಿನಿಕ್ ಅನ್ನು ಸಚಿವರು ಉದ್ಘಾಟಿಸಿದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಡಿಎಚ್‌ಒ ಡಾ. ಪ್ರಭುಲಿಂಗ ಮಾನಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಎಚ್. ರವಿ, ತಹಸೀಲ್ದಾರ ವಿಜಯಕುಮಾರ, ತಾಪಂ ಇಒ ಬಸವರಾಜ ಸಜ್ಜನ, ಟಿಎಚ್‌ಒ ಡಾ. ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಇದ್ದರು. ಪುರಸಭೆ ಆಡಳಿತಾಧಿಕಾರಿ ಹಂಪಣ್ಣ ಸಜ್ಜನ ಸ್ವಾಗತಿಸಿದರು. ಶಿಕ್ಷಕ ಬಂದೇನವಾಜ ನಾಲತವಾಡ ನಿರೂಪಿಸಿದರು.ನಾವು ಮಾಡಿದ ಉಚಿತ ಯೋಜನೆಗಳನ್ನೆ ಬಿಜೆಪಿ ಪಕ್ಷ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಚುನಾವಣೆಯಲ್ಲಿ ಅಲ್ಲಿನ ಜನತೆಗೆ ಕಾಪಿ ಮಾಡಿದ್ದು, ಉಚಿತ ಯೋಜನೆಗಳನ್ನು ಹೊರತರುವ ಸಾಹಸ ಬಿಜೆಪಿ ಪಕ್ಷದವರು ಯಾಕೆ ಮಾಡುತ್ತಿಲ್ಲ.

- ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.