ಮಂಗಳೂರು: ನಗರದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ ಮಾಡುವ ಉದ್ದೇಶವಿದ್ದು, ಸೂಕ್ತ ಜಾಗ ಗುರುತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಮಂಗಳೂರು: ನಗರದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ ಮಾಡುವ ಉದ್ದೇಶವಿದ್ದು, ಸೂಕ್ತ ಜಾಗ ಗುರುತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪತ್ರಕರ್ತರ ಜತೆ ಸಂವಾದ ನಡೆಸಿದ ಅವರು, ವಿಐಪಿ ಸಂಚಾರಕ್ಕೆ, ತುರ್ತು ವೈದ್ಯಕೀಯ ಅಗತ್ಯತೆಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಶಾಶ್ವತ ಹೆಲಿಪ್ಯಾಡ್‌ನ ಅಗತ್ಯವಿದೆ. ಹೆಲಿ ಟೂರಿಸಂಗೂ ಇದು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.ನಂತೂರಿನಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಯೋಜನಾ ವರದಿ ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಬೈಕಂಪಾಡಿ- ಕೆಐಒಸಿಎಲ್, ನಂತೂರು- ಕೆಪಿಟಿ ಎರಡೂ ಕಡೆ ಫ್ಲೈ ಓವರ್ ನಿರ್ಮಾಣ ಆಗಲಿದೆ. ಡಿಪಿಆರ್‌ ಅಂತಿಮಗೊಂಡ ಕೂಡಲೆ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದಿದ್ದರೆ ವ್ಯಾಪಾರ ಪರವಾನಗಿ ರದ್ದು ಮಾಡಲಾಗುವುದು ಎಂಬ ಆದೇಶವನ್ನು ನಾನು ಹೊರಡಿಸಿಲ್ಲ. ಆ ರೀತಿಯ ಆದೇಶ ಮಾಡಲೂ ಸಾಧ್ಯವಾಗಲ್ಲ. ನಾಮಫಲಕಗಳು ಕರ್ನಾಟಕದಲ್ಲಿ ಕನ್ನಡದಲ್ಲಿ ಇರಬೇಕು. ಕನ್ನಡದೊಂದಿಗೆ ಇತರ ಭಾಷೆಗಳನ್ನು ಬಳಸಬಾರದು ಎಂದೇನಿಲ್ಲ. ಯಾವುದೇ ಭಾಷೆಯಲ್ಲಿ ಬೋರ್ಡ್ ಇರಲಿ. ಆದರೆ ಕನ್ನಡದಲ್ಲಿ ಕೂಡ ಇರುವುದು ಕಡ್ಡಾಯ ಎಂದು ಸ್ಪಷ್ಟನೆ ನೀಡಿದರು.

ಜಿಲ್ಲಾಧಿಕಾರಿ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್. ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ, ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಇದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ನಿರೂಪಿಸಿದರು.