ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಖಾಯಂ ಜನತಾ ನ್ಯಾಯಾಲಯ

| Published : Aug 31 2025, 02:00 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಸಾರ್ವಜನಿಕರ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರು ಒಟ್ಟು ಆರು ಖಾಯಂ ಜನತಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜನರು ಖಾಯಂ ಜನತಾ ನ್ಯಾಯಾಲಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಲಬುರಗಿ ಖಾಯಂ ಜನತಾ ನ್ಯಾಯಾಲಯದ ಸದಸ್ಯ, ನ್ಯಾಯಾಧೀಶ ವಿಜಯವಿಠಲ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಸಾರ್ವಜನಿಕರ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರು ಒಟ್ಟು ಆರು ಖಾಯಂ ಜನತಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜನರು ಖಾಯಂ ಜನತಾ ನ್ಯಾಯಾಲಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಲಬುರಗಿ ಖಾಯಂ ಜನತಾ ನ್ಯಾಯಾಲಯದ ಸದಸ್ಯ, ನ್ಯಾಯಾಧೀಶ ವಿಜಯವಿಠಲ ಹೇಳಿದರು.

ಪಟ್ಟಣದ ಪುರಸಭೆ ಕಚೇರಿಯ ಸಭಾಭವನದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾಡಳಿತ ಹಾಗೂ ಪುರಸಭೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಖಾಯಂ ಜನತಾ ನ್ಯಾಯಾಲಯದ ವಿಶೇಷ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಈ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಪ್ರಕ್ರಿಯೆ ಅತ್ಯಂತ ಸರಳವಾಗಿದೆ. ಯಾವುದೇ ಶುಲ್ಕವನ್ನು ಭರಿಸುವ ಅಗತ್ಯವಿಲ್ಲ. ಖಾಯಂ ಜನತಾ ನ್ಯಾಯಾಲಯವು ಪರ್ಯಾಯ ಪರಿಹಾರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರು ಸೇವೆಯಲ್ಲಿರುತ್ತಾರೆ. ಜನರು ಸಾರಿಗೆ ಸೇವೆ, ಅಂಚೆ, ವಿದ್ಯುತ್, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ವಿಮೆ, ವೈದ್ಯಕೀಯ ನಿರ್ಲಕ್ಷ್ಯತೆ ಮತ್ತಿತರ ಪ್ರಕರಣಗಳನ್ನು ದಾಖಲು ಮಾಡಿ ಕಾನೂನು ಬದ್ಧವಾಗಿ ಆದಷ್ಟು ಬೇಗ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತದೆ ಎಂದರು. ಹಿರಿಯ ನ್ಯಾಯವಾದಿ, ಮಧ್ಯಸ್ಥಗಾರ ವ್ಹಿ.ಬಿ.ಮರ್ತುರ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರ ಜನರಿಗೆ ಉಚಿತ ಕಾನೂನು ಸೇವೆಯನ್ನು ಒದಗಿಸುತ್ತದೆ. ಕಾನೂನಿಗೆ ಶ್ರೀಮಂತ-ಬಡವ, ಜಾತಿ, ಪಕ್ಷ, ಪಂಥ ಎಂಬ ಬೇಧವಿಲ್ಲ. ಕಾನೂನು ಮುಂದೆ ಎಲ್ಲರೂ ಒಂದೇ. ಯಾರೂ ಕಾನೂನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ವ್ಯವಸ್ಥೆ ಜಾರಿಗೆ ತಂದಿದೆ. ಈ ನ್ಯಾಯಾಲಯದಲ್ಲಿ ₹ ೧ ಕೋಟಿಯವರೆಗಿನ ಮೊತ್ತದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಅತಿ ಸಣ್ಣ ಮೊತ್ತದ ಪ್ರಕರಣಗಳನ್ನು ಸಹ ಇಲ್ಲಿ ದಾಖಲಿಸಬಹುದಾಗಿದೆ. ಈ ನ್ಯಾಯಾಲಯದಿಂದ ಜನರಿಗೆ ಹಣ, ಸಮಯ ಉಳಿಯುವ ಜೊತೆಗೆ ಅವರ ಮಾನಸಿಕ ಒತ್ತಡ ಸಹ ತಪ್ಪಿಸಬಹುದಾಗಿದೆ ಎಂದು ಹೇಳಿದರು.ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶ ಈರಪ್ಪ ಢವಳೇಶ್ವರ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಸಿದ್ದಯ್ಯ, ವನ್ಯಾಯವಾದಿ ಬಿ.ಪಿ.ಪತ್ತಾರ ಇದ್ದರು. ಶ್ರೀದೇವಿ ಭಜಂತ್ರಿ ಪ್ರಾರ್ಥಿಸಿದರು. ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಸ್ವಾಗತಿಸಿದರು. ವಿರೇಶ ಗುಡ್ಲಮನಿ ನಿರೂಪಿಸಿ, ವಂದಿಸಿದರು. ತಹಸೀಲ್ದಾರ್‌ ಕಚೇರಿ ಸಭಾಂಗಣ, ಮುತ್ತಗಿಯ ಗ್ರಾಪಂ ಸಭಾ ಭವನ,ಉಕ್ಕಲಿಯ ಗ್ರಾಪಂ ಸಭಾ ಭವನ, ಇಂಗಳೇಶ್ವರದ ಚಂದ್ರ ಶಾಲೆಯಲ್ಲಿ ಖಾಯಂ ಜನತಾ ನ್ಯಾಯಾಲಯದ ಅಭಿಯಾನ ಕಾರ್ಯಕ್ರಮ ಜರುಗಿತು.ಕೋಟ್‌ರಾಜ್ಯದಲ್ಲಿ ೧೯೮೭ ರಿಂದಲೂ ಕಾನೂನು ಸೇವೆಗಳ ಪ್ರಾಧಿಕಾರವು ಜನರಿಗೆ ಕಾನೂನು ಅರಿವು-ನೆರವು ನೀಡುತ್ತಿದೆ. ಜೊತೆಗೆ ಲೋಕ ಅದಾಲತ್ ಮೂಲಕವು ಜನರಿಗೆ ಕಾನೂನು ಪರಿಹಾರ ಒದಗಿಸುತ್ತಿದೆ. ಪ್ರಾಧಿಕಾರವು ಜನರಿಗೆ ಇಷ್ಟು ಸೌಲಭ್ಯ ನೀಡುತ್ತಿದ್ದರೂ ದುರಾಸೆ, ದ್ವೇಷ ಸೇರಿದಂತೆ ವಿವಿಧ ಕಾರಣಗಳಿಂದ ವ್ಯಾಜ್ಯಗಳ ಸಂಖ್ಯೆ ಹೆಚ್ಚಳವಾಗುತ್ತಿರುವದು ವಿಷಾದಕರ ಸಂಗತಿ. ಜನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ೨೦೦೭ ರಿಂದ ಖಾಯಂ ಜನತಾ ನ್ಯಾಯಾಲಯ ಅಸ್ತಿತ್ವಕ್ಕೆ ಬಂದಿದೆ. ಈ ನ್ಯಾಯಾಲಯದಲ್ಲಿ ಸರ್ಕಾರಿ ಇಲಾಖೆಗಳು ಮೂಲಭೂತ ಸೌಲಭ್ಯ ಕೊಡುವಲ್ಲಿ ವಿಫಲವಾದರೆ ವ್ಯಾಜ್ಯ ಹೂಡಲು ಅವಕಾಶವಿದೆ. ಸರಳ ನ್ಯಾಯದಾನದ ಮೂಲಕ ಎಲ್ಲ ಜನರು ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲಿದೆ. ಖಾಯಂ ಜನತಾ ನ್ಯಾಯಾಲಯ ಕಾರ್ಯನಿರ್ವಹಣೆ ಪ್ರಖರತೆ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನ್ಯಾ.ಅರವಿಂದ ಹಾಗರಗಿ, ಹಿರಿಯ ಸಿವ್ಹಿಲ್ ನ್ಯಾಯಾಧೀಶ