ಕಾಯಂ ಜನತಾ ಕೋರ್ಟ್‌ಗಳಿಂದ ನ್ಯಾಯದ ಪರ ಕೆಲಸ

| Published : Aug 23 2025, 02:00 AM IST

ಸಾರಾಂಶ

ಕಾಯಂ ನ್ಯಾಯಾಲಯಗಳು ಜನಪರ ತೀರ್ಪು ನೀಡುವಲ್ಲಿ ಹಾಗೂ ರಾಜಿ ಸಂಧಾನಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಲ್ಲಿ ಕೆಲಸ ಮಾಡುತ್ತಿವೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕಾಯಂ ನ್ಯಾಯಾಲಯಗಳು ಜನಪರ ತೀರ್ಪು ನೀಡುವಲ್ಲಿ ಹಾಗೂ ರಾಜಿ ಸಂಧಾನಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಲ್ಲಿ ಕೆಲಸ ಮಾಡುತ್ತಿವೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ಹೇಳಿದರು.

ಪಟ್ಟಣದ ತಾಪಂಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ತಾಲೂಕು ಪಂಚಾಯ್ತಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾಯಂ ಜನತಾ ನ್ಯಾಯಾಲಯ ಜಾಗೃತಿ ಅಭಿಯಾನ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಯಂ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ರಾಜಿ ಸಾಧ್ಯವಾಗದಿದ್ದರೆ, ಅಂತಿಮ ತೀರ್ಪು ನೀಡಲಾಗುತ್ತದೆ. ಆ ತೀರ್ಪು ಅಂತಿಮವಾಗಿರುತ್ತದೆ. ಕಾಯಂ ಜನತಾ ನ್ಯಾಯಾಲಯವು ಮುಖ್ಯವಾಗಿ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಪಟ್ಟಂತಹ ವಿವಾದಗಳನ್ನು ರಾಜಿ ಮತ್ತು ವಿಚಾರಣೆ ಮೂಲಕ ತೀರ್ಮಾನ ಮಾಡುವ ಅಧಿಕಾರ ಹೊಂದಿದೆ. ಗ್ರಾಹಕರು ಕಾನೂನು ಅರಿತು ಗೌರವಿಸುವ ಮೂಲಕ ಕಾನೂನು ಪಾಲಿಸುವಂತಾಗಬೇಕು ಎಂದರು.

ಸಿವಿಲ್ ನ್ಯಾಯಾಧೀಶ ಸುನೀತ ಮಾತನಾಡಿ, ಕಾಯಂ ಜನತಾ ನ್ಯಾಯಾಲಯವು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಒಂದು ವೇದಿಕೆಯಾಗಿದ್ದು ಎಲ್ಲರೂ ಇದರ ಬಳಕೆಗೆ ಮುಂದಾಗಬೇಕು ಎಂದರು.

ಹಿರಿಯ ವಕೀಲ ಮಹದೇವ ಮಾತನಾಡಿ, ಕಾಯಂ ನ್ಯಾಯಾಲಯದಲ್ಲಿ ₹1 ಕೋಟಿವರೆಗಿನ ಮೊತ್ತದ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಸಾರ್ವಜನಿಕ ಉಪಯುಕ್ತ ಸೇವೆಗಳ ಬಗ್ಗೆ 15 ರಿಂದ 20 ವರ್ಷಗಳ ಅನುಭವ ಹೊಂದಿರುವ ಇಬ್ಬರು ಸದಸ್ಯರು ಹಾಗೂ ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದಂತೆ ಗಣ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಕಾವ್ಯಶ್ರೀ, ತಾಪಂ ಇಓ ಗುರುಶಾಂತಪ್ಪ ಬೆಳ್ಳುಂಡಗಿ, ಪಿಎಸೈ ವರ್ಷ, ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಸೀಮಾ ಇನ್ನಿತರಿದ್ದರು.