ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ: ರಾಘವೇಂದ್ರ

| Published : Mar 19 2024, 12:46 AM IST

ಸಾರಾಂಶ

ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಪುನಶ್ಚೇತನ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಬಿಜೆಪಿಯ ಗುರಿಯಾಗಿದೆ. ಶರಾವತಿ ಸಂತ್ರಸ್ತರಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ ಮೋಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈಗ ನಾವು ಅದನ್ನು ಸರಿ ಮಾಡಲು ಹೊರಟಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಮಾವೇಶದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಪುನಶ್ಚೇತನ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಬಿಜೆಪಿಯ ಗುರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿ, ಶರಾವತಿ ಸಂತ್ರಸ್ತರಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ ಮೋಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈಗ ನಾವು ಅದನ್ನು ಸರಿ ಮಾಡಲು ಹೊರಟಿದ್ದೇವೆ ಎಂದರು.

1952ರಲ್ಲಿಯೇ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಯಿತು. 1980ರಲ್ಲಿ ಅರಣ್ಯ ಕಾಯ್ದೆ ಜಾರಿಗೆ ಬಂದಿತು. ಆಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಕಾಯ್ದೆಯೂ ಸಂತ್ರಸ್ತರ ಪರವಾಗಿಯೇ ಇತ್ತು. ಅಧಿಕಾರಕ್ಕೆ ಇದ್ದಾಗ ಏನನ್ನು ಮಾಡದ ಕಾಂಗ್ರೆಸ್‌ ಪಕ್ಷದವರು ಈಗ ಬಿಜೆಪಿ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಈಗಾಗಲೇ ರಾಜ್ಯದ ಬಿಜೆಪಿ ಮುಖಂಡರು ಕೇಂದ್ರದ ಅರಣ್ಯ ಸಚಿವರ ಭೇಟಿ ಮಾಡಿದ್ದೇವೆ. ಸಂತ್ರಸ್ತರ ಪಟ್ಟಿಯನ್ನು ಕೂಡ ಸಿದ್ಧಪಡಿಸಿ ನೀಡಿದ್ದೇವೆ. ಆದಷ್ಟು ಬೇಗ ಶರಾವತಿ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆ ಎಂದರು.

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಆಗಿವೆ. ರೈಲ್ವೆ, ಹೆದ್ದಾರಿ, ಸೇತುವೆಗಳು, ಮೊಬೈಲ್ ಟವರ್‌ಗಳು, ಎಫ್ಎಂ, ವಿಮಾನ ನಿಲ್ದಾಣ, ಕೇಂದ್ರೀಯ ವಿ.ವಿ., ಹೀಗೆ ಹತ್ತು ಹಲವು ಯೋಜನೆಗಳು ಸಾವಿರಾರು ಕೋಟಿ ರು. ವೆಚ್ಚದಲ್ಲಿ ಈಗಾಗಲೇ ಜಾರಿಗೆ ಬಂದಿವೆ. ರಾಷ್ಟ್ರೀಯ ಹೆದ್ದಾರಿಗಳು ಈಗಾಗಲೇ ಸಾವಿರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿವೆ. ಬೈಂದೂರು ಕ್ಷೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ಇತ್ತೀಚೆಗೆ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಬಂದಾಗ ಎಲ್ಲಾ ರೈಲ್ವೆ ಮೇಲ್ಸೇತುವೆ ಹಾಗೂ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ. ಇದರ ನಡುವೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆಗುಂಬೆ ಮತ್ತು ಸೋಮೇಶ್ವರದ ನಡುವೆ ಸುಮಾರು 12 ಕಿಮೀ ದೂರದ ಸುರಂಗ ಮಾರ್ಗವನ್ನು ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಮೂರು ಸಾವಿರ ಕೋಟಿ ರು. ಖರ್ಚಾಗಲಿದೆ. ಇದರಿಂದ ಶಿವಮೊಗ್ಗದಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ಪ್ರಯಾಣಿಕರಿಗೆ ಹಾಗೂ ಸರಕು ಸಾಗಣೆಗೆ ತುಂಬಾ ಅನುಕೂಲವಾಗುತ್ತದೆ ಎಂದರು.

ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ‌ ಕೆಲಸಗಳು ಆಗುತ್ತಿವೆ. ಯಡಿಯೂರಪ್ಪ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕಾಲದಿಂದಲೂ ಕಾಂಗ್ರೆಸ್ ಸರ್ಕಾರದ ಅವಧಿ‌ ಹೊರತುಪಡಿಸಿ, ಜಿಲ್ಲೆಗೆ ಸಾಕಷ್ಟು ಅನುದಾನ ಹರಿದುಬಂದಿದೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಷ್ಟೊಂದು ಜನ ಸೇರಿದ್ದಾರೆ ಎಂದು ಹೇಳಿದರು.

- - - (-ಫೋಟೋ: ಬರಬಹುದು)