ಸಾರಾಂಶ
ಅರೆ ಅಲೆಮಾರಿ ಸಮುದಾಯದ ಟೆಂಟ್ ವಾಸಿಗಳಿಗೆ ತಾಡಪತ್ರೆ ವಿತರಿಸಿ ಮಾತನಾಡಿದ ಶಾಸಕ ನೇಮರಾಜ ನಾಯ್ಕ ಅವರು, ಈ ಕುರಿತು ಈಗಾಗಲೇ ಸರ್ಕಾರಿ ನಿವೇಶನ ಗೊತ್ತುಪಡಿಸಿದ್ದು, ಸಹಾಯಕ ಆಯುಕ್ತರೊಂದಿಗೆ ಚರ್ಚಿಸಲಾಗುವುದು. ಟೆಂಟ್ ವಾಸಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಹಗರಿಬೊಮ್ಮನಹಳ್ಳಿ: ಅರೆ ಅಲೆಮಾರಿ ಸಮುದಾಯದ ಜನರು ನಿವೇಶನ ಮತ್ತು ವಸತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಂಟ್ ವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಲು ನಿವೇಶನ ಕಲ್ಪಿಸಲಾಗುವುದು ಎಂದು ಶಾಸಕ ನೇಮರಾಜ ನಾಯ್ಕ ತಿಳಿಸಿದರು.
ಪಟ್ಟಣದಲ್ಲಿನ ಅರೆ ಅಲೆಮಾರಿ ಸಮುದಾಯದ ಟೆಂಟ್ ವಾಸಿಗಳಿಗೆ ತಾಡಪತ್ರೆ ವಿತರಿಸಿ ಮಾತನಾಡಿದ ಅವರು, ಈ ಕುರಿತು ಈಗಾಗಲೇ ಸರ್ಕಾರಿ ನಿವೇಶನ ಗೊತ್ತುಪಡಿಸಿದ್ದು, ಸಹಾಯಕ ಆಯುಕ್ತರೊಂದಿಗೆ ಚರ್ಚಿಸಲಾಗುವುದು. ಟೆಂಟ್ ವಾಸಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ ಮಾತನಾಡಿ, ಸರ್ಕಾರ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿದೆ. ಟೆಂಟ್ ವಾಸಿಗಳ ಪ್ರದೇಶಕ್ಕೆ ಇತ್ತೀಚೆಗಷ್ಟೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರು ಭೇಟಿ ನೀಡಿದ ಫಲವಾಗಿ ತಾಡಪತ್ರೆ ವಿತರಣೆಯಾಗುತ್ತಿವೆ. ಇತ್ತೀಚೆಗಷ್ಟೇ ಜಿಲ್ಲಾಮಟ್ಟದಲ್ಲಿ ಸಮುದಾಯದ ಜನರಿಗೆ ತಾಡಪತ್ರೆ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿತ್ತು. ತಾಲೂಕಿನಲ್ಲಿ ಒಟ್ಟು 100 ಅರೆ ಅಲೆಮಾರಿ ಗುಡಿಸಲು ವಾಸಿಗಳನ್ನು ಗುರುತಿಸಲಾಗಿದ್ದು, ಇದೀಗ ಒಟ್ಟು 40 ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ದಿಗಡೂರು, ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ. ಮಲ್ಲಿಕಾರ್ಜುನ, ಆರ್‌ಎಸ್‌ಎಸ್‌ಎನ್ ನಿರ್ದೇಶಕ ಈ. ಭರತ್, ಪುರಸಭೆ ಸದಸ್ಯರಾದ ನಾಗರಾಜ ಜನ್ನು, ಬಿ.ಗಂಗಾಧರ ಇದ್ದರು.