ಹಾಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಡಾ.ಮಂತರ್ ಗೌಡ ಭರವಸೆ

| Published : Jun 26 2024, 12:33 AM IST

ಸಾರಾಂಶ

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಂಗಳವಾರ ಹೆಬ್ಬಾಲೆ ಸಮೀಪದ ಚೆನ್ನೆನಹಳ್ಳಿ ಮತ್ತು ಕೂಡಿಗೆ ಬಳಿಯ ಬ್ಯಾಡಗೊಟ್ಟ ಹಾಡಿಗಳಿಗೆ ಭೇಟಿ ನೀಡಿದರು. ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸುವುದು ಉದ್ದೇಶ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕು ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗಿರಿಜನ ಹಾಡಿಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಚಿಂತನೆ ಹರಿಸಲಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಅವರು ಹೆಬ್ಬಾಲೆ ಸಮೀಪದ ಚೆನ್ನೆನಹಳ್ಳಿ ಮತ್ತು ಕೂಡಿಗೆ ಬಳಿಯ ಬ್ಯಾಡಗೊಟ್ಟ ಹಾಡಿಗಳಿಗೆ ಭೇಟಿ ನೀಡಿ ಮಾತನಾಡಿದರು.

ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸುವುದು. ಈ ನಿಟ್ಟಿನಲ್ಲಿ ಐಟಿಡಿಪಿ ಇಲಾಖೆ ಮೂಲಕ ಈಗಾಗಲೇ ಒಂದು ಕೋಟಿ ರು. ಅನುದಾನ ದೊರೆತಿದ್ದು, ಆ ಮೂಲಕ ಅಲ್ಲಿನ ರಸ್ತೆ, ಮತ್ತಿತರ ಸೌಲಭ್ಯ ಹಾಗೂ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು ಎಂದರು.

ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಮಾತ್ರ ಹಾಡಿಗಳಿಗೆ ಭೇಟಿ ನೀಡುವುದು ಸಮಂಜಸ ಅಲ್ಲ ಎಂದ ಅವರು, ಈ ಸಂಬಂಧ ತಾನು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಭೇಟಿ ನೀಡುವ ಕಾರ್ಯಕ್ರಮ ನಡೆದಿದೆ. ಇದೀಗ ಕುಶಾಲನಗರ ತಾಲೂಕು ವ್ಯಾಪ್ತಿಯ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತಿದೆ ಎಂದರು.

ಜನಪ್ರತಿನಿಧಿಗಳು ಅಧಿಕಾರಿಗಳ ಮೂಲಕ ನೇರ ಸಂಪರ್ಕ ಸಾಧಿಸುವ ಮೂಲಕ ಹಾಡಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಕಿರಣ್ ಗೌರಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ವಕ್ತಾರ ನಟೇಶ್ ಗೌಡ ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಡಿಗಳ ಮುಖ್ಯಸ್ಥರು ಇದ್ದರು.