- ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ಸದಸ್ಯರ ಒತ್ತಾಯ । ಸರ್ಕಾರಕ್ಕೆ ಮನವಿ

- - -

- ಜಯದೇವ ವೃತ್ತದಲ್ಲಿ ಬೃಹತ್‌ ಮಾನವ ಸರಪಳಿ ನಿರ್ಮಿಸಿ ಆಗ್ರಹ

- ರಾಜ್ಯಾಧ್ಯಕ್ಷ ತಿರುಮಲೇಶ್ ಗೌಡ ಇತರರು ಪ್ರತಿಭಟನೆಯಲ್ಲಿ ಭಾಗಿ

- ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಬೇಡಿಕೆಗಳ ಮನವಿ ಅರ್ಪಣೆ


- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರವಾನಗಿ ಭೂಮಾಪಕರನ್ನು ಸರ್ಕಾರಿ ಕೆಲಸದಲ್ಲಿ ಕಾಯಂಗೊಳಿಸುವುದು ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಹಾಗೂ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಹಳೆ ಪಿ.ಬಿ. ರಸ್ತೆ ಮೂಲಕ ಸಾಗಿ ಅರುಣ ಸರ್ಕಲ್, ಕೋರ್ಟ್ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಮಾರ್ಗಮಧ್ಯೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸದ ಸರ್ಕಾರ:

ಸಂಘದ ರಾಜ್ಯಾಧ್ಯಕ್ಷ ತಿರುಮಲೇಶ್ ಗೌಡ ಈ ಸಂದರ್ಭ ಮಾತನಾಡಿ, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಭೂಮಿಗೆ ಸಂಬಂಧಿಸಿದಂತೆ 23ಕ್ಕೂ ಹೆಚ್ಚು ರೀತಿಯ ಕಡತಗಳನ್ನು ನಾವುಗಳು ನಿರ್ವಹಣೆ ಮಾಡುತ್ತೇವೆ. ಆದರೆ, ಪರವಾನಗಿ ಭೂಮಾಪಕರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಕೆಲಸಕ್ಕೆ ತಕ್ಕಂತೆ ಸಂಬಳವಿಲ್ಲ. ಕೆಲವು ವರ್ಷಗಳ ಕಾಲ ಯಾವುದೇ ವೇತನ ಇಲ್ಲದೆಯೂ ಕೆಲಸ ಮಾಡಿದ್ದೇವೆ. ತಿಂಗಳಿಗೆ 30 ಪ್ರಕರಣಗಳನ್ನು ಮುಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಸರ್ಕಾರಿ ಭೂಮಾಪಕರಂತೆ ಎಲ್ಲ ಇಲಾಖೆಯಲ್ಲೂ ನಾವು ಕೆಲಸ ಮಾಡಿದ್ದೇವೆ. ಆದರೂ ನಮ್ಮ ಬೇಡಿಕೆ ಈಡೇರಿಸುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಉಗ್ರ ಹೋರಾಟ:

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸಿದ್ದರಾಜು ಮಾತನಾಡಿ, ರಾಜ್ಯದಲ್ಲಿ 23 ವರ್ಷಗಳಿಂದ ಕನಿಷ್ಠ ಸೇವಾ ಶುಲ್ಕಕ್ಕೆ ಕಾರ್ಯನಿರ್ವಹಿಸುತ್ತಿರುವ 6 ಸಾವಿರ ಸರ್ಕಾರಿ ಪರವಾನಿಗೆ ಭೂಮಾಪಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಫೆ.25ರಿಂದ ಮುಷ್ಕರ ಹಮ್ಮಿಕೊಂಡಿದ್ದೇವೆ. ಬೆಳಗಾವಿ, ಮೈಸೂರು, ಕೋಲಾರದಲ್ಲಿ ಪ್ರತಿಭಟನೆ ನಡೆಸಿದ್ದು, ಇದೀಗ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಸರ್ಕಾರ ಇದಕ್ಕೂ ಸ್ಪಂದನೆ ಮಾಡದಿದ್ದರೆ ಬೆಂಗಳೂರಿನಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಡಿ.ಎಂ.ಪ್ರಸನ್ನ ಕುಮಾರ್ ಮಾತನಾಡಿ, ನಮ್ಮ ನಮ್ಮಲ್ಲೇ ಜಗಳ ಹಚ್ಚಿ ಒಡಕು ಉಂಟುಮಾಡಲು ಕೆಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಂದೇ ಕೆಲಸಕ್ಕೆ ಹಾಜರಾಗದಿದ್ದರೆ ನಿಮ್ಮನ್ನು ಕೆಲಸದಿಂದ ಅಮಾನತು ಮಾಡಲಾಗುವುದು ಎಂದು ಸರ್ಕಾರಿ ನೌಕರರಿಗೆ ಹೇಳುವಂತೆ ನೋಟಿಸ್ ನೀಡಲಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ನಮಗೆ ಸೇವೆ ಕಾಯಮಾತಿ ನೀಡಬೇಕು ಅಥವಾ ಸಮಾನ ವೇತನ ನೀಡಬೇಕು. ಇಲ್ಲದಿದ್ದರೆ ಕೆಲಸಕ್ಕೆ ಹಾಜರಾಗದೇ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.

ಈ ಸಂದರ್ಭ ಹಾಜರಿದ್ದ ಯಾದವಾನಂದ ಸ್ವಾಮೀಜಿ ಮಾತನಾಡಿ, ಭೂಮಾಪಕರು ಸರ್ಕಾರದ ಪ್ರಮುಖ ಅಂಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಬೆಂಬಲ:

ಭೂಮಾಪಕರ ಈ ಹೋರಾಟಕ್ಕೆ ವಿವಿಧ ರೈತ ಸಂಘಟನೆಗಳು ತೀವ್ರ ಬೆಂಬಲ ವ್ಯಕ್ತಪಡಿಸಿವೆ. ಪ್ರತಿಭಟನೆಯಲ್ಲಿ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಭೂ ಮಾಪಕರ ನ್ಯಾಯಯುತ ಹೋರಾಟಕ್ಕೆ ರಾಜ್ಯದ 30 ಸಾವಿರಕ್ಕೂ ಹೆಚ್ಚು ರೈತರು ಬೆಂಬಲವಾಗಿ ನಿಲ್ಲಲಿದ್ದಾರೆ. ಸರ್ಕಾರ ವಿಳಂಬ ಮಾಡದೇ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳಾದ ಜಿ.ಪಿ.ಮಂಜು, ದಾವಣಗೆರೆ ಜಿಲ್ಲಾಧ್ಯಕ್ಷ ಟಿ.ಎಸ್. ಗುರುಮೂರ್ತಿ, ಎಂ.ಕೆ.ರಾಜಪ್ಪ, ವೃಷಭೇಂದ್ರಪ್ಪ, ಶಿವರಾಜ್, ಜಗದೀಶ್, ಕೆ.ಪಿ.ಭಾರ್ಗವಲು, ಎಂ.ದ್ವಾರಕೀಶ್, ಎಲ್.ಕೋದಂಡರಾಮ್, ಲಾಲ್ ಸಾಬ್ ಮುಲ್ಲಾ, ಎಚ್.ಎನ್. ಬಚ್ಚೇಗೌಡ, ಎಂ.ಎಸ್. ಪ್ರಾಣೇಶ್, ವಿ.ಸಿ.ಸುರೇಶ್ ಕುಮಾರ್, ಪಿ.ಆರ್.ಷಣ್ಮುಖ, ಪಿ.ಮಂಜು, ಹೊನ್ನವ್ವ ತಳವಾರ, ಸಿ.ಬಿ.ನಾಗಲಕ್ಷ್ಮೀ, ಹೇಮಂತ್ ಕುಮಾರ್, ಎಸ್.ಬಸವರಾಜ್, ಶಂಕರಗೌಡ ಪಾಟೀಲ್, ಡಿ.ಮಾರಪ್ಪ, ಬಾಸ್ಕರ್, ಶಿವಾನಂದಯ್ಯ, ವೀರಭದ್ರಯ್ಯ, ಮಹೇಶ್, ಮಂಜುನಾಥ್, ಕಿರಣ್ ಕುಮಾರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪರವಾನಗಿ ಭೂಮಾಪಕರು ಇದ್ದರು.

- - -

-19ಕೆಡಿವಿಜಿ31, 32:

ದಾವಣಗೆರೆಯಲ್ಲಿ ಮಂಗಳವಾರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ಜಯದೇವ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.