ಉದ್ಯೋಗ ನೀಡುವ ಕೋರ್ಸುಗಳಿಗೆ ಅನುಮತಿ: ಡಾ. ಸುಧಾಕರ್

| Published : Oct 19 2025, 01:02 AM IST

ಸಾರಾಂಶ

ಬ್ರಹ್ಮಾವರ ತಾಲೂಕಿನ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಒಂದು ಕೋಟಿ ರು. ಅನುದಾನದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ ನಡೆಯಿತು.

ಬಾರ್ಕೂರು ಪ್ರಥಮ ದರ್ಜೆ ಕಾಲೇಜು, ನೂತನ ಸಭಾಂಗಣಕ್ಕೆ ಸಚಿವರಿಂದ ಶಿಲಾನ್ಯಾಸ

ಕನ್ನಡಪ್ರಭ ವಾರ್ತೆ ಬ್ರಹ್ಮಾವರರಾಜ್ಯದಲ್ಲಿ ಉದ್ಯೋಗ ಲಭ್ಯತೆಯ ಆಧಾರದಲ್ಲಿ ಹೊಸ ಕೋರ್ಸುಗಳಿಗೆ ಅನುಮತಿ ನೀಡಲಾಗುತ್ತಿದೆ. ಯಾವ ಕೋರ್ಸುಗಳಿಗೆ ಉಪನ್ಯಾಸಕರ ಬೇಡಿಕೆ ಇದೆ ಎಂಬ ಆದ್ಯತೆಯಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಈಗಾಗಲೇ 2 ಸಾವಿರ ಉಪನ್ಯಾಸಕರ ನೇಮಕಾತಿ ಮಾಡಲಾಗಿದೆ ಎಂದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.ಅವರು ಶನಿವಾರ ಬ್ರಹ್ಮಾವರ ತಾಲೂಕಿನ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಒಂದು ಕೋಟಿ ರು. ಅನುದಾನದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಕಾಲೇಜುಗಳಲ್ಲಿ ಕಟ್ಟಡದ ವಿನ್ಯಾಸವನ್ನು ಭವಿಷ್ಯದ ದೃಷ್ಟಿ ಇಟ್ಟುಕೊಂಡು ರಚಿಸಬೇಕು, ಆದ್ದರಿಂದಲೇ ಕಾಲೇಜುಗಳಲ್ಲಿ ಅತ್ಯಗತ್ಯ ಮೂಲಸೌಕರ್ಯಗಳಿಗೆ ಆದ್ಯತೆಯ ಮೇಲೆ ಅನುದಾನ ಹಂಚಿಕೆಗೆ ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದರು.ಅಧ್ಯಕ್ಷತೆ ವಹಿಸಿದ ಕುಂದಾಪುರ ಶಾಸಕ ಎ.ಕಿರಣ್‌ ಕುಮಾರ್‌ ಕೊಡ್ಗಿ, ಕುಂದಾಪುರ ತಾಲೂಕಿನಲ್ಲಿ 3 ಪ್ರಥಮ ದರ್ಜೆ ಕಾಲೇಜುಗಳಿವೆ, ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕಾಲೇಜುಗಳಿಗೆ ಬರುವ ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲರಾದ್ದರಿಂದ, ಇಲ್ಲಿ ಸುಸಜ್ಜಿತ ವಸತಿ ನಿಲಯವನ್ನು ಆದ್ಯತೆಯಲ್ಲಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಹಂಚಿಕೆಯನ್ನು ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತಂದಲ್ಲಿ, ಅದನ್ನು ಅಗತ್ಯ ಕಾರ್ಯಗಳಿಗೆ ಸದ್ಭಳಕೆ ಮಾಡಲು ಸಾಧ್ಯವಾಗುತ್ತದೆ ಎಂದವರು ಸಲಹೆ ನೀಡಿದರು.ಅತಿಥಿಗಳಾಗಿ ವಿ.ಪ. ಸದಸ್ಯ ಮಂಜುನಾಥ ಭಂಡಾರಿ, ಬಾರ್ಕೂರು ಗ್ರಾ.ಪಂ. ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ, ಹನೆಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಕೆ.ಆರ್‌. ಕವಿತಾ, ಮಂಗಳೂರು ವಿವಿ ಸಿಂಡಿಕೇಟ್‌ ಸದಸ್ಯರಾದ ಸತೀಶ್‌ ಕುಮಾರ್‌ ಪಾವೂರು, ರಘುರಾಜ್‌ ಕದ್ರಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೋಶನ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.