ಜಿಲ್ಲೆಯಲ್ಲಿ ಪಹಣಿ ತಿದ್ದುಪಡಿಗೆ ಅವಕಾಶ

| Published : Aug 27 2025, 01:00 AM IST

ಸಾರಾಂಶ

ಸೆಪ್ಟಂಬರ್ 1ರಿಂದ ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಬರುವ ಸೆ.01 ರಿಂದ 15 ದಿನಗಳ ಕಾಲ ಪಹಣಿಯಲ್ಲಿನ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿಕೊಡಲು ವಿಶೇಷ ಅಭಿಯಾನ ಆರಂಭಿಸಲಾಗುವುದು. ರೈತರು ಕೂಡಲೆ ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ತಹಸೀಲ್ದಾರರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಪಹಣಿ, ಆರ್‌ಟಿಸಿಯಲ್ಲಿನ ಲೋಪದೋಷಗಳ ತಿದ್ದುಪಡಿ ಅಧಿಕಾರವನ್ನು ಈ ಮೊದಲು ತಹಸೀಲ್ದಾರರಿಗೆ ನೀಡಲಾಗಿತ್ತು. ಆದರೆ ಇದೀಗ ಈ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ವಹಿಸಲಾಗಿದೆ. ಆರ್‌ಟಿಸಿಯಲ್ಲಿನ ಸಣ್ಣಪುಟ್ಟ ದೋಷಗಳಿಂದ ರೈತರಿಗೆ ಹಲವು ವಿಧದ ತೊಂದರೆಯಾಗುತ್ತಿದೆ, ಇದನ್ನು ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದಾಗಿ ರೈತ ಮುಖಂಡರು ಜಿಲ್ಲಾಡಳಿತದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ.

ಸೆ.1 ರಿಂದ ಹದಿನೈದು ದಿನಗಳ ಕಾಲ ಜಿಲ್ಲೆಯಾದ್ಯಂತ ಆಯಾ ತಾಲೂಕು ಕೇಂದ್ರಗಳಲ್ಲಿ ಪಹಣಿ ತಿದ್ದುಪಡಿ ಅಭಿಯಾನವನ್ನು ಕೈಗೊಳ್ಳಲಾಗುವುದು. ಪಹಣಿಯಲ್ಲಿನ ಸಣ್ಣಪುಟ್ಟ ದೋಷಗಳನ್ನು ತಿದ್ದುಪಡಿ ಮಾಡಲು (ಅಪೀಲು ಪ್ರಕರಣಗಳನ್ನು ಹೊರತುಪಡಿಸಿ) ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರೈತರು ತಮ್ಮ ಅರ್ಜಿಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಆಯಾ ತಹಸೀಲ್ದಾರರಿಗೆ ಸಲ್ಲಿಸಬೇಕು. ತಹಸೀಲ್ದಾರರು ಇಂತಹ ಅರ್ಜಿಗಳನ್ನು ತಮ್ಮ ಹಂತದಲ್ಲಿ ಪರಿಶೀಲಿಸಿ, ಅರ್ಹ ಅರ್ಜಿಗಳ ಪಟ್ಟಿ ಮಾಡಿಕೊಂಡು, ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದಲ್ಲಿ, ಉಪವಿಭಾಗಾಧಿಕಾರಿಗಳು, ಅರ್ಹ ಅರ್ಜಿಗಳಿಗೆ ಸಂಬಂಧಿಸಿದ ಆರ್‍ಟಿಸಿ ತಿದ್ದುಪಡಿಗೆ ಅನುಮೋದನೆ ನೀಡುವರು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.