ಖಾಸಗಿ ಕ್ಲಿನಿಕ್‌ಗಳಿಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

| Published : Oct 25 2024, 01:09 AM IST

ಖಾಸಗಿ ಕ್ಲಿನಿಕ್‌ಗಳಿಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

, ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸುವ ಸಂಸ್ಥೆಗಳು ಕಾಯ್ದೆಯಲ್ಲಿನ ಸೂಚಿಸಿರುವ ಎಲ್ಲ ಅರ್ಹತಾ ಷರತ್ತುಗಳನ್ನು ಪೂರ್ಣಗೊಳಿಸಿರುವ ಕುರಿತಂತೆ ಕೂಲಂಕುಷವಾಗಿ ಪರಿಶೀಲಿಸಿ, ನಂತರ ಅಗತ್ಯ ಅನುಮತಿ ನೀಡುವಂತೆ ಡಿಸಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಕಾರವಾರ: ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಇದುವರೆಗೂ ನೋಂದಣಿ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸುತ್ತಿರುವ ಕ್ಲಿನಿಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ಅಲೋಪತಿಯ 388, ಆಯುರ್ವೇದ 140 ಮತ್ತು ಯೋಗ ಮತ್ತು ನ್ಯಾಚುರೋಪತಿಯ 3 ಸೇರಿದಂತೆ ಒಟ್ಟು 571 ಖಾಸಗಿ ಆರೋಗ್ಯ ಸಂಸ್ಥೆಗಳು ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಡಿಸಿ, ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸುವ ಸಂಸ್ಥೆಗಳು ಕಾಯ್ದೆಯಲ್ಲಿನ ಸೂಚಿಸಿರುವ ಎಲ್ಲ ಅರ್ಹತಾ ಷರತ್ತುಗಳನ್ನು ಪೂರ್ಣಗೊಳಿಸಿರುವ ಕುರಿತಂತೆ ಕೂಲಂಕುಷವಾಗಿ ಪರಿಶೀಲಿಸಿ, ನಂತರ ಅಗತ್ಯ ಅನುಮತಿ ನೀಡುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಹೊಸದಾಗಿ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ನೋಂದಣಿ ಮಾಡಿಸುವವರಿಗೆ ಮತ್ತು ನವೀಕರಣ ಮಾಡುವವರಿಗೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ನೋಂದಣಿ ಮತ್ತು ನವೀಕರಣ ಕುರಿತಂತೆ ಪ್ರಸ್ತುತ ಇರುವ ನಿಯಮಗಳ ಬಗ್ಗೆ ಅಗತ್ಯ ಮಾಹಿತಿ ನೀಡಬೇಕು. ಈ ಕುರಿತಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಅನುಮೋದನೆ ನೀಡಬೇಕು. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಬಿ.ವಿ., ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ್, ಐಎಂಎ ಅಧ್ಯಕ್ಷ ಡಾ. ಸುರೇಶ ಭಟ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ ಇದ್ದರು.

ಕುಮಟಾ ತಾಲೂಕು ಸೌಧದ ಲಕ್ಷಾಂತರ ರು. ವಿದ್ಯುತ್ ಬಿಲ್ ಬಾಕಿ

ಕುಮಟಾ: ಪಟ್ಟಣದ ಮೂರೂರು ರಸ್ತೆಯಲ್ಲಿರುವ ತಾಲೂಕು ಸೌಧದ ವಿವಿಧ ವಿಭಾಗಗಳಿಂದ ಕಳೆದ ಒಂದು ವರ್ಷದಿಂದ ವಿದ್ಯುತ್ ಬಿಲ್ ಸಂದಾಯ ಮಾಡದ ಹಿನ್ನೆಲೆ ಗುರುವಾರ ತಾಲೂಕು ಸೌಧಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.ತಾಲೂಕು ಸೌಧದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ ಸಹಿತ ಕಂದಾಯಕ್ಕೆ ಸಂಬಂಧಿಸಿದ ಹಲವು ವಿಭಾಗಗಳು ಇವೆ. ಎಲ್ಲ ಸೇರಿ ಕಳೆದ ಒಂದು ವರ್ಷದಿಂದ ತಾಲೂಕು ಸೌಧದ ವಿದ್ಯುತ್ ಬಿಲ್ ₹೪,೧೩,೮೭೧ ಬಾಕಿಯಾಗಿದೆ. ಹೀಗಾಗಿ ಹೆಸ್ಕಾಂ ಎಇಇ ರಾಜೇಶ ಮಡಿವಾಳ ಹಾಗೂ ಇತರ ಅಧಿಕಾರಿಗಳ ತಂಡ ತಾಲೂಕು ಸೌಧಕ್ಕೆ ಬಂದು ವಿವಿಧ ವಿಭಾಗದಲ್ಲಿ ಬಳಕೆಯಾಗಿರುವ ವಿದ್ಯುತ್ ಪರಿಶೀಲನೆ ನಡೆಸಿ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಬಗ್ಗೆ ವಿವರಿಸಿದ್ದಾರೆ.

ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದರೂ ಕ್ರಮ ಕೈಗೊಳ್ಳದೇ, ಬಾಕಿ ಜಮಾ ಮಾಡದ ಹಿನ್ನೆಲೆ ವಿದ್ಯುತ್ ಪೂರೈಕೆ ಕಡಿತಗೊಳಿಸುವುದಾಗಿ ತಿಳಿಸಿದರು. ಈ ವೇಳೆ ತಾಲೂಕು ಸೌಧದ ಅಧಿಕಾರಿಗಳು ಸಮಯಾವಕಾಶ ಕೋರಿದರು. ತಾಲೂಕು ಸೌಧಕ್ಕೆ ಸಂಬಂಧಿಸಿ ತಹಸೀಲ್ದಾರ್ ಅವರೇ ಜವಾಬ್ದಾರರಾಗಿದ್ದಾರೆ. ಕೂಡಲೇ ವಿದ್ಯುತ್ ಬಿಲ್ ಬಾಕಿ ಜಮಾ ಮಾಡುವಂತೆ ಸೂಚಿಸಿದ ಹೆಸ್ಕಾಂ ಅಧಿಕಾರಿ ಎರಡು ದಿನದ ಅವಕಾಶ ನೀಡಿದರು.