ಯಲ್ಲಾಪುರ: ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಜನರೆಲ್ಲರೂ ಒಂದೇ ಎಂಬ ಭಾವನೆಯಿಂದ ಶಾಲಾ-ಕಾಲೇಜು ಮಕ್ಕಳಿಗೆ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಿತ್ತು. ಅಲ್ಲದೇ ಹಿಜಾಬ್ ನಿಷೇಧಿಸಿತ್ತು. ಆದರೆ, ಈ ಉಪಚುನಾವಣೆಯ ನಂತರ ಮುಸ್ಲಿಮರನ್ನು ಓಲೈಸಲು ಇಂದಿನ ಕಾಂಗ್ರೆಸ್ ಸರ್ಕಾರ ಸಮವಸ್ತ್ರ ನೀತಿ ರದ್ದುಗೊಳಿಸಿ, ಹಿಜಾಬ್ ಧರಿಸಲು ಅನುಮತಿ ನೀಡಿರುವುದು ತೀವ್ರ ಖಂಡನೀಯ ಎಂದು ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

ಈ ಸರ್ಕಾರದ ತೀರ್ಮಾನದಿಂದ ಹಿಂದುಗಳ ಭಾವನೆಗೆ ತೀವ್ರ ಧಕ್ಕೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿಕೊಂಡು ಬಂದರೆ ಹಿಂದುಗಳು ಕೇಸರಿ ಶಾಲು ಧರಿಸುವುದಕ್ಕೆ ನಮ್ಮ ಪಕ್ಷ ಶಾಲನ್ನು ನೀಡುತ್ತದೆ. ಕೇಸರಿ ಆಂದೋಲನ ನಡೆಸುವೆವು. ಎಲ್ಲರೂ ದೇಶದ ನಾಗರಿಕರಾದ ಮೇಲೆ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದ ಅವರು, ನಮ್ಮ ಕ್ಷೇತ್ರದ ಶಾಸಕರು ಅಪಾರ ಅನುಭವ ಹೊಂದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಹಲವಾರು ಯೋಜನೆಗಳನ್ನು ತಂದಿದ್ದಾರೆ. ಆದರೆ, ಈ ವರೆಗೂ ಯಾವ ಯೋಜನೆಯೂ ಪೂರ್ತಿಗೊಂಡಿಲ್ಲ. ಶಾಸಕರು ಈ ಕುರಿತು ಜನರಿಗೆ ಉತ್ತರ ನೀಡಬೇಕಾಗಿದೆ. ಅಲ್ಲದೇ ಜಿ+೨ ಮನೆ ೭ ವರ್ಷದಿಂದ ಈ ವರೆಗೂ ಹಂಚಿಕೆಯಾಗಿಲ್ಲ. ಈಗ ಅನಧಿಕೃತವಾಗಿ ಯಾವುದೇ ಸರ್ಕಾರಿ ಮೊಹರು ಇಲ್ಲದೇ ಫಾರಂ ಪ್ರಿಂಟ್ ಮಾಡಿ ₹೫೦,೦೦೦ ಮತ್ತು ₹೨೫,೦೦೦ ಪಡೆಯುತ್ತಿರುವ ಬಗ್ಗೆ ಸ್ಪಷ್ಟನೆ ನೀಡಬೇಕು. ಅಲ್ಲದೇ ಅಧಿಕಾರಿಗಳಿಗೆ ಈ ಎಲ್ಲ ಅವ್ಯವಹಾರದ ಕುರಿತು ತನಿಖೆ ಮಾಡುವಂತೆ ಸೂಚನೆ ನೀಡಬೇಕು. ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದರು.

ಪಪಂ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಮಾತನಾಡಿ, ಪಟ್ಟಣದ ಹೆಬ್ಬಾರ ನಗರದಲ್ಲಿ ಜಿ+೨ ಮನೆಗಳು ಕಳೆದ ೭ ವರ್ಷದ ಹಿಂದೆ ಪ್ರಾರಂಭಗೊಂಡರೂ ಈ ವರೆಗೆ ಹಂಚಿಕೆಯಾಗಿಲ್ಲ. ಅಲ್ಲದೇ ಈಗಾಗಲೇ ₹೫೦,೦೦೦ ನೀಡಿದ ₹೩೫೦ ಫಲಾನುಭವಿಗಳಿಗೆ ಅನ್ಯಾಯ ಅಲ್ಲವೇ? ಅವರ ಸಾಲ, ಶೂಲ ಮುಗಿದಿಲ್ಲ. ಅವರಿಂದ ಅನಧಿಕೃತ ಫಾರಂ ಮೇಲೆ ಸಹಿ ಪಡೆದು, ೫೦೦೦೦ ಕೊಳಚೆ ನಿರ್ಮೂಲನಾ ಮಂಡಳಿ ಹೆಸರಿನಲ್ಲಿ ಇನ್ನೂ ೨೫೦೦೦ ಹೆಬ್ಬಾರ ನಗರದ ಜಿ+೨ ರೆಸಿಡೆನ್ಶಿಯಲ್ ಅಸೋಸಿಯೇಶನ್ ಹೆಸರಿಗೆ ಡಿಡಿ ಮಾಡಲು ಫಲಾನುಭವಿಗಳಿಗೆ ತಿಳಿಸಲಾಗಿದೆ. ಇದು ಅಕ್ರಮವಾದುದು. ಈ ಬಗ್ಗೆ ವಿಚಾರಿಸಿದಾಗ ಸೇವಾ ಶುಲ್ಕ ಎಂದು ಹೇಳಲಾಗುತ್ತಿದೆ. ಹಿಂದೆ ₹೫೦೦೦೦ ನೀಡಿದ ಲೆಕ್ಕ ಇಲ್ಲ. ಪಪ ನಿಂದ ಅನುದಾನದಲ್ಲೇ ಗಟಾರ, ರಸ್ತೆ, ವಿದ್ಯುತ್ ಎಲ್ಲವೂ ಆಗಿದೆ. ಸರ್ಕಾರಿ ಸುತ್ತೋಲೆ ಕೂಡ ಇಲ್ಲದೇ ಇದೊಂದು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ಶಾಸಕರು ಸ್ಪಷ್ಟನೆ ನೀಡಬೇಕು. ತನಿಖೆ ಕೈಗೊಳ್ಳಬೇಕು. ಮನೆ ಹಂಚಿಕೆ ದಿನಾಂಕ ನಿಗದಿಗೊಳಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಶಾಸಕರು ಪೂರೈಸದಿದ್ದರೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ವಿವಿಧ ಪದಾಧಿಕಾರಿಗಳಾದ ಕೆ.ಟಿ. ಹೆಗಡೆ, ರಜತ ಬದ್ದಿ, ಗಣೇಶ ಪಾಟಣಕರ, ರವಿ ದೇವಾಡಿಗ ಉಪಸ್ಥಿತರಿದ್ದರು.