ಶೋಷಿತರ ಮೇಲೆ ನಿರಂತರ ದೌರ್ಜನ್ಯ, ಸರ್ಕಾರದ ಮೌನ

| Published : Mar 20 2024, 01:19 AM IST

ಸಾರಾಂಶ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಶೋಷಿತ, ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಮೇಲೆ ನಿತ್ಯ ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತಿದೆ ಎಂದು ಸಂಘಟನೆ ಆರೋಪ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಾದ್ಯಂತ ಶೋಷಿತರು, ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದ್ದರೂ ಸರ್ಕಾರದಿಂದ ಯಾವುದೇ ಶಿಸ್ತು ಕ್ರಮಗಳಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಶೋಷಿತ ಸಂರಕ್ಷಣಾ ಸಮಿತಿಯಿಂದ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಯಿತು.

ನಗರದ ಡಾ.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಸಿಎಂಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಸಹ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವದು ಖಂಡನಾರ್ಹ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಶೋಷಿತ, ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಮೇಲೆ ನಿತ್ಯ ಅತ್ಯಾಚಾರ, ದಬ್ಬಾಳಿಕೆ, ಕಗ್ಗೊಲೆಗಳು ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಭಾರತ ದೇಶದ ಸಂವಿಧಾನ ನಿರ್ಮಾತೃ, ಡಾ. ಅಂಬೇಡ್ಕರ್‌ ಪ್ರತಿಮೆ ಧ್ವಂಸ ಮಾಡಲಾಗುತ್ತಿದೆ ಅಲ್ಲದೆ ಡಾ.ಅಂಬೇಡ್ಕರ್‌ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಶಬ್ಧಗಳನ್ನು ಬರೆಯುತ್ತಿರುವದಲ್ಲದೆ ಸಂಸದ ಅನಂತಕುಮಾರ ಹೆಗಡೆ ಸಂವಿಧಾನವನ್ನೇ ಬದಲಿಸುವದಾಗಿ ಹೇಳಿ ಹಗುರವಾಗಿ ಮಾತನಾಡಿದ್ದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖೇದಕರ ಸಂಗತಿಯಾಗಿದೆ ಎಂದಿದ್ದಾರೆ.

ಅಲ್ಲದೇ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಶೋಷಿತ, ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಕೇವಲ ಮಾಧ್ಯಮ ಸುದ್ದಿಯಲ್ಲಿ ಮಾತ್ರ ಇದೆ. ಆದರೆ ಇಲ್ಲಿಯವರೆಗೂ ಯಾವುದೇ ಒಬ್ಬ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಂಡಿರುವ ಉದಾಹರಣೆಗಳು ಇಲ್ಲ.

ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನಮ್ಮನಾಳುತ್ತಿರುವ ಸರ್ಕಾರದ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಈ ಎರಡು ಅಧಿಕಾರಿಗಳಿಗೆ ಕುಮ್ಮಕ್ಕು ಇರುವುದರಿಂದ ಆ ಅಧಿಕಾರಿಗಳು ಮಂತ್ರಿಗಳ ಕೈಗೊಂಬೆಯಾಗಿಸಿಕೊಂಡು ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಕೆಲ ಘಟನೆಗಳ ವಿವರಗಳನ್ನು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿಗಳು ತಕ್ಷಣವೇ ಈ ಕುರಿತು ಗಂಭೀರವಾಗಿ ಶಿಸ್ತು ಕ್ರಮ ಜರುಗಿಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಮಿತಿ ಗೌರವಾಧ್ಯಕ್ಷ ರಾಜಕುಮಾರ ಮೂಲಭಾರತಿ, ಕಾರ್ಯಾಧ್ಯಕ್ಷ ವಿನೋದ ರತ್ನಾಕರ್‌, ಜಿಲ್ಲಾಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ, ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್‌ ಹಾಗೂ ಉಪಾಧ್ಯಕ್ಷ ರಾಹುಲ್‌ ಖಂದಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಗ್ರಹಿಸಿದರು.