ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬೇಕಾದರೆ ಪರಿಶ್ರಮ, ಶ್ರದ್ಧೆ, ಧೈರ್ಯದ ಜೊತೆಗೆ ತಾಳ್ಮೆಯೂ ಬಹಳ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.ಕನ್ನಡಸೇನೆ- ಕರ್ನಾಟಕ ಜಿಲ್ಲಾ ಘಟಕದಿಂದ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಐಎಎಸ್ ಮತ್ತು ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಒರಟುತನ ಪ್ರದರ್ಶನವೇ ಧೈರ್ಯವಂತಿಕೆ ಎಂಬ ಭಾವನೆ ಇಂದಿನ ಯುವಕರಲ್ಲಿದೆ. ಒರಟುತನ ಧೈರ್ಯವಲ್ಲ. ಸೋಲನ್ನು ಅರಗಿಸಿಕೊಂಡು ಸಾಧನೆಯತ್ತ ಹೆಜ್ಜೆ ಇಡುವುದು ನಿಜವಾದ ಧೈರ್ಯವಂತಿಕೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿಲ್ಲವೆಂದಾಕ್ಷಣ ಪ್ರಯತ್ನವನ್ನು ಕೈಬಿಡಬಾರದು. ಅದರಲ್ಲಿ ಯಶಸ್ಸು ಸಾಧಿಸಿಯೇ ತೀರುವೆನೆಂಬ ಹಠತೊಟ್ಟು ಮತ್ತೆ ಮತ್ತೆ ಪ್ರಯತ್ನಿಸಿದರೆ ಖಂಡಿತ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಯುವಕರಿಗೆ ಕಿವಿಮಾತು ಹೇಳಿದರು.ಓದುವಿಕೆಯಲ್ಲಿ ಪರಿಪೂರ್ಣತೆ ಇರಬೇಕು. ಆಳವಾದ ಜ್ಞಾನವನ್ನು ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು, ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಂಡು ಕಲಿಕೆಯಲ್ಲಿ ತೊಡಗಿದಾಗ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕೆ ನಂಬಿಕೆ, ಆತ್ಮವಿಶ್ವಾಸ, ಧೈರ್ಯ ಬಹಳ ಮುಖ್ಯ. ನಿಮ್ಮ ಮನಸ್ಸು ಯಾವಾಗಲೂ ಯಶಸ್ಸನ್ನೇ ನೋಡುತ್ತಿರಬೇಕು. ಅದಕ್ಕೆ ಏಕಾಗ್ರತೆ ಬಹಳ ಮುಖ್ಯ. ಅದನ್ನು ಸಾಧಿಸಬೇಕಾದರೆ ಯೋಗ, ವ್ಯಾಯಾಮ, ಧ್ಯಾನವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ. ನಿರಂತರ ಅಧ್ಯಯನದಲ್ಲಿ ತೊಡಗಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮನಸ್ಸು ಒತ್ತಡಕ್ಕೆ ಸಿಲುಕಲು ಬಿಡದೆ ನಿರ್ಮಲವಾಗಿಟ್ಟುಕೊಂಡು ಓದಿನಲ್ಲಿ ತೊಡಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೇ ಬಾರಿಗೆ ಯಶಸ್ಸು ಸಿಗುವುದು ಅಪರೂಪ. ಹಾಗಂತ ನಿರಾಸೆಗೊಳಗಾಗಬಾರದು, ಪ್ರಯತ್ನವನ್ನೂ ಕೈಬಿಡಬಾರದು. ಯಶಸ್ಸು ಸಿಗದಿರುವುದಕ್ಕೆ ಕಾರಣವೇನು, ಎಲ್ಲಿ ನಾವು ಎಡವಿದ್ದೇವೆ ಎನ್ನುವುದನ್ನು ತಿಳಿದುಕೊಂಡು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ಜೊತೆಗೆ ಸಾಧನೆಯ ಗುರಿ ಮುಟ್ಟಬೇಕು ಎಂದರು.
ಸತತ ಪ್ರಯತ್ನದ ನಡುವೆಯೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿಲ್ಲವೆಂದಾಕ್ಷಣ ಜೀವನ ಅಲ್ಲಿಗೇ ಮುಗಿಯುವುದಿಲ್ಲ. ಬೇರೆ ಅವಕಾಶಗಳನ್ನು ಹುಡುಕಿ ಅದರಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪರಿಶ್ರಮವಿದ್ದ ಕಡೆ ಪ್ರತಿಫಲ ಇದ್ದೇ ಇರುತ್ತದೆ. ಆದ ಕಾರಣ ಎಲ್ಲರೂ ಉತ್ತಮವಾಗಿ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶ್ರಮವಿಲ್ಲದೆ ಏನನ್ನೂ ಪಡೆಯುವುದಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶಿಕ್ಷಣವಂತರಾದಾಗ ಮಾತ್ರ ಭವಿಷ್ಯವೂ ಉಜ್ವಲವಾಗುತ್ತದೆ, ಸಮಾಜದಲ್ಲಿ ಬದಲಾವಣೆ ತರುವುದಕ್ಕೂ ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೆ, ಬೇಡದ ವಿಚಾರಗಳ ಕಡೆ ಗಮನಹರಿಸದೆ ಸಾಧನೆಯತ್ತ ಹೆಜ್ಜೆ ಇಡಬೇಕು. ಆಂದುಕೊಂಡಿದ್ದನ್ನು ಸಾಧಿಸುವುದರೊಂದಿಗೆ ಕೀರ್ತಿಶಾಲಿಗಳಾಗಿ ಬೆಳವಣಿಗೆ ಕಾಣುವಂತೆ ಹಾರೈಸಿದರು.
ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಪಿ.ಎನ್.ಹೇಮಚಂದ್ರ ವಿಚಾರಮಂಡನೆ ಮಾಡಿದರು. ಆದರ್ಶ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಎಲ್.ಮೂರ್ತಿ, ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ರಾಜ್ಯ ಪದಾಧಿಕಾರಿ ಎನ್.ಮುನಿರಾಜೇಗೌಡ, ರಾಜ್ಯ ಉಪಾಧ್ಯಕ್ಷ ಮುನಿಕೃಷ್ಣ, ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯ ಇದ್ದರು.