ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಪಟ್ಟಣದ ಸರ್ವೋದಯ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟಕ್ಕೆ ತನ್ನ ವಿದ್ಯಾರ್ಥಿಗಳನ್ನು ಬಿಂಬಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಚಿತ್ರನಟ ರಮೇಶ ಅರವಿಂದ್ ಹೇಳಿದರು. ಕುಣಿಗಲ್ ಪಟ್ಟಣದಲ್ಲಿ ಸರ್ವೋದಯ ಶಾಲೆ ವತಿಯಿಂದ ಏರ್ಪಡಿಸಿದ್ದ ಸರ್ವೋದಯಕ್ಕೆ 20ರ ಸಂಭ್ರಮ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಸಮಯದಲ್ಲಿ ನಿಮ್ಮ ಜೀವನ ರೂಪಿಸಿಕೊಳ್ಳುವುದು ಬಹು ಮುಖ್ಯ. ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಇದ್ದಾಗ ಸಾಧನೆಯ ಸಂಪೂರ್ಣ ಸುಲಭ ಆಗುತ್ತದೆ. ಸಾಧನೆಯ ಹಾದಿಯಲ್ಲಿ ಬಿಡದ ಪರಿಶ್ರಮ ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ಎಲ್ಲವನ್ನು ಕೂಡ ನಾವು ಕೈವಶ ಮಾಡಿಕೊಳ್ಳಬಹುದು. ಅಂತಹ ಸಾಧನೆಯನ್ನು ಸರ್ವೋದಯ ಶಾಲೆಯ ವಿದ್ಯಾರ್ಥಿಗಳು ಮಾಡಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಸಂಸ್ಥೆಗೆ ಇಸ್ರೋ ಅಧ್ಯಕ್ಷರಾದ ಕಿರಣ್ ಕುಮಾರ್ ಸೇರಿದಂತೆ ಹಲವರು ಸಾಧಕರನ್ನು ಕರೆಸಿ ಉತ್ತಮ ಮಾರ್ಗದರ್ಶನ ನೀಡಿರುವ ಹೆಗ್ಗಳಿಕೆಯಲ್ಲಿ ಈ ಸಂಸ್ಥೆ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಸರ್ವೋದಯ ಶಾಲೆಯ ವತಿಯಿಂದ ಮಾಡುತ್ತಿರುವುದು ಅಭಿನಂದನೀಯ ಎಂದರು.ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಆಧುನಿಕತೆಯ ಶಿಕ್ಷಣದ ಪರಿಪೂರ್ಣತೆಯನ್ನ ಸರ್ವೋದಯ ಶಾಲೆ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಶಿಕ್ಷಣಕ್ಕೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಈ ಸಂಸ್ಥೆ ಪೂರೈಸುವುದರ ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಛಲ ಹಾಗೂ ನಂಬಿಕೆಗಳನ್ನು ತುಂಬುವ ಒಂದು ವಿಶೇಷ ಶಕ್ತಿ ಕೇಂದ್ರ ಆಗಿದೆ. ಇಂತಹ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಈ ಸಂಸ್ಥೆಯ ಅಧ್ಯಕ್ಷರು ಹಾಗೂ ತಂಡಕ್ಕೆ ಅಭಿನಂದಿಸಬೇಕೆಂದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ನಾಗರಾಜು ಮಾತನಾಡಿ ಹಲವಾರು ದಿನಗಳಿಂದ ಮಕ್ಕಳು ಪ್ರಗತಿ ಸಾಧಿಸಲು ಶ್ರಮಿಸಿದ್ದಾರೆ. ಸಮಯವನ್ನು ಅವರಿಗೆ ನೀಡುತ್ತಿದ್ದೇನೆ ಅವರ ಅಭಿವೃದ್ಧಿ ಮತ್ತು ಅವರ ಪ್ರೋತ್ಸಾಹ ನನಗೆ ಬಹು ಮುಖ್ಯ ಎಂದರು. ಈ ಸಂದರ್ಭದಲ್ಲಿ ಸರ್ವೋದಯ ಶಾಲೆಯ ಅಧ್ಯಕ್ಷರಾದ ನಾಗರಾಜು, ಉಪಾಧ್ಯಕ್ಷೆ ನಳಿನಿ ನಾಗರಾಜು ಕಾರ್ಯಾಧ್ಯಕ್ಷ ಡಾ.ನಿಖಿಲ್, ಗೌರವ ಎಚ್ ಎಂ. ಶಾಲಾ ಮುಖ್ಯಸ್ಥರಾದ ತುಳಸಿ ಹಾಗೂ ಕೃಷ್ಣಪ್ಪ. ವ್ಯವಸ್ಥಾಪಕ ಪ್ರಕಾಶ್, ಶಿವಣ್ಣ ಸೇರಿದಂತೆ ಇತರರು ಇದ್ದರು.