ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು: ಮಸ್ತಾನವಲಿ

| Published : Feb 19 2024, 01:33 AM IST

ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು: ಮಸ್ತಾನವಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನ ತಪಸ್ಸಿನಂತಿದೆ. ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಯತ್ನ ನಿಲ್ಲಿಸಬಾರದು. ನಿರಂತರ ಪ್ರಯತ್ನದಿಂದ ಮುನ್ನಡೆ ಸಾಧ್ಯ

ಭಾಲ್ಕಿ: ವಿದ್ಯಾರ್ಥಿ ಜೀವನ ತಪಸ್ಸಿನಂತಿದೆ. ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಯತ್ನ ನಿಲ್ಲಿಸಬಾರದು. ನಿರಂತರ ಪ್ರಯತ್ನದಿಂದ ಮುನ್ನಡೆ ಸಾಧ್ಯ ಎಂದು ಡೈಮಂಡ ಪಿಯು ಕಾಲೇಜಿನ ಪ್ರಾಚಾರ್ಯ ಮಸ್ತಾನವಲಿ ನುಡಿದರು.

ಅವರು ಪಟ್ಟಣದ ಡೈಮಂಡ್ ಗ್ರೂಪ್ ಆಫ್ ಇನ್ಸಿಟ್ಯೂಟ್ ಅಡಿಯಲ್ಲಿ ನಡೆಯುತ್ತಿರುವ ಡೈಮಂಡ್‌ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಷ್ಯವೇತನ ಪರೀಕ್ಷೆಯ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಿರಂತರ ಪ್ರಯತ್ನವೇ ಯಶಸ್ಸಿನ ಮೆಟ್ಟಿಲಾಗಿದೆ ಎಂದರು.

ಡೈಮಂಡ್ ಪಿಯು ಕಾಲೇಜಿನಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಅತ್ಯುನ್ನತ ಹುದ್ದೆಯಲ್ಲಿರುವುದು ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದು ನುಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಭೊಸಲೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿವಿಧ ಶಾಲೆಗಳ 7500 ವಿದ್ಯಾರ್ಥಿಗಳು, ಭಾಲ್ಕಿಯ ಡೈಮಂಡ ಕಾಲೇಜಿನಲ್ಲಿ ನಡೆದ ಶಿಷ್ಯವೇತನ ಪರೀಕ್ಷೆ ಬರೆದಿದ್ದರು. ಅವರಲ್ಲಿ 25 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಉಚಿತ ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಇವರೆಲ್ಲರಿಗೂ ಕಾಲೇಜಿನಿಂದ ಇಂದು ಗೌರವಿಸಲಾಗುತ್ತಿದ್ದು, ಇವರೆಲ್ಲರೂ ಮುಂದೆಯೂ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿ ಕಾಲೇಜಿನ ಕೀರ್ತಿ ಹೆಚ್ಚಿಸುವರು ಎನ್ನುವ ವಿಶ್ವಾಸ ನಮಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸಿ ವಿದ್ಯಾಭ್ಯಾಸ ಮುಂದುವರೆಸಬೇಕು ಅಂದಾಗ ಮಾತ್ರ ಉನ್ನತ ಗುರಿ ಮುಟ್ಟಲು ಸಾಧ್ಯ. ಗುರಿ ಮಹತ್ವದ್ದಾಗಿದ್ದು, ಸಾಧಿಸುವ ಛಲ ಹೊಂದಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡೈಮಂಡ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಧನರಾಜ ನೀಲಂಗೆ, ಮಹಾತ್ಮಾಗಾಂಧಿ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಗೌಸಿಮಾ ಮಸ್ತಾನವಲಿ, ಬಸವಕಲ್ಯಾಣ ಡೈಮಂಡ ಕಾಲೇಜಿನ ಪ್ರಾಚಾರ್ಯ ಶೇಖ್ ಹುಸೇನ್, ಬಿ.ಕರ್ಣಂ, ಜಾಧವ ಉಪಸ್ಥಿತರಿದ್ದರು.