ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯುವಕರ ಸಂಘಕ್ಕೆ ವೈಯಕ್ತಿಕವಾಗಿ ₹1 ಲಕ್ಷ ಪ್ರೋತ್ಸಾಹ ಧನ ನೀಡುವೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಘೋಷಿಸಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯುವಕರ ಸಂಘಕ್ಕೆ ವೈಯಕ್ತಿಕವಾಗಿ ₹1 ಲಕ್ಷ ಪ್ರೋತ್ಸಾಹ ಧನ ನೀಡುವೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಘೋಷಿಸಿದರು.

ಸ್ಥಳೀಯ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲತವಾಡ ಹೋಬಳಿ ಮಟ್ಟದ ಜನಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಯುವಕರ ಸಂಘ ರಚಿಸಿ ಯುವಜನರ ಪ್ರತಿಭೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರದಿಂದ ವರ್ಷಕ್ಕೆ ₹10 ಲಕ್ಷ ಅನುದಾನ ನೀಡುವ ಯೋಜನೆ ರೂಪಿಸಲಾಗಿದೆ. ಯುವಕರು ಈ ಅನುದಾನವನ್ನು ಬಳಸಿಕೊಂಡು ವಿವಿಧ ಕಾರ್ಯಕ್ರಮ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಸಮಸ್ಯೆ ಹೊತ್ತು ಕಚೇರಿಯಿಂದ ಕಚೇರಿಗೆ ಅಲೆದಾಡುವ ಬದಲು, ಜನರ ಬಳಿಗೆ ಸರ್ಕಾರವೇ ಬಂದು ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜನಸೇವಾ ಆಂದೋಲನ ಕಾರ್ಯಕ್ರಮ ರೂಪಿಸಲಾಗಿದೆ. ಒಂದೇ ವೇದಿಕೆಯಲ್ಲಿ ಎಲ್ಲ ಇಲಾಖೆಗಳ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ಕಲ್ಪಿಸಲಾಗುತ್ತಿದೆ. ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು.ಮುಖ್ಯಮಂತ್ರಿಗಳು ಪ್ರತಿ ಶನಿವಾರ ಜನಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದ್ದಾರೆ. ಹೋಬಳಿ ಮಟ್ಟದ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಕಾರ್ಯಕ್ರಮ ನಡೆಸಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.ಗ್ಯಾರಂಟಿ ಯೋಜನೆ ಸ್ಥಗಿತಗೊಂಡವರಿಗೆ ಪರಿಹಾರ:

ಎಸ್‌ಐಆರ್ ಪರಿಷ್ಕರಣೆ ಸಂದರ್ಭದಲ್ಲಿ ಕೆಲ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಕೆಲವು ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಂಡಿವೆ. ಅಂತಹವರು ನಮೂನೆ-7 ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಂಡರೇ ನಿಯಮಾನುಸಾರ ಸ್ಥಗಿತಗೊಂಡಿರುವ ಗ್ಯಾರಂಟಿ ಯೋಜನೆಗಳನ್ನು ಪುನಃ ಪಡೆಯಲು ಅವಕಾಶವಿದೆ ಎಂದರು.

ಚಿಮ್ಮಲಗಿ ಕಾಲುವೆಗೆ 13 ವರ್ಷವಾದರೂ ಪರಿಹಾರವಿಲ್ಲ:

ಜನಸೇವಾ ಆಂದೋಲನದಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆ ಸಮಸ್ಯೆ ರೈತರ ಆಕ್ರೋಶಕ್ಕೆ ಕಾರಣವಾಯಿತು. ಕಾಲುವೆ ನಿರ್ಮಾಣಕ್ಕಾಗಿ ಜಮೀನು ಅಗೆದರೂ 13 ವರ್ಷ ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ. ಕಾಲುವೆಗೆ ನೀರೂ ಹರಿಯುತ್ತಿಲ್ಲ ಎಂದು ರೈತರು ಶಾಸಕರ ಮುಂದೆ ಅಳಲು ತೋಡಿಕೊಂಡರು.ಸಮಸ್ಯೆ ಹಲವು ವರ್ಷಗಳಿಂದ ಬಾಕಿ ಉಳಿದಿರುವುದನ್ನು ಒಪ್ಪಿಕೊಂಡ ಶಾಸಕ ನಾಡಗೌಡರು, ಶೀಘ್ರದಲ್ಲೇ ವಿಶೇಷ ಸಭೆ ಕರೆಯುತ್ತೇನೆ. ಕೆಬಿಜೆಎನ್‌ಎಲ್‌ನ ಎಲ್ಲ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ರೈತರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಸೂಚನೆ:

ನಾಗಬೇನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರೇಶನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಕೇವಲ 2 ಇಂಚಿನ ಪೈಪ್‌ಲೈನ್ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಜೆಜೆಎಂ ಯೋಜನೆಯ ಸ್ಥಿತಿ ಏನಾಗಿದೆ ಎಂದು ಶಾಸಕರು ಪ್ರಶ್ನಿಸಿದಾಗ ಕಾಮಗಾರಿ ಇನ್ನೂ ಬಾಕಿ ಇದೆಂದು ಅಧಿಕಾರಿಗಳು ಉತ್ತರಿಸಿದರು.ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಯಾರು ಎಂದು ಶಾಸಕರು ಪ್ರಶ್ನಿಸಿದಾಗ ಅಧಿಕಾರಿಗಳು ಬಿ.ಎಸ್.ಪಾಟೀಲ ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕ ನಾಡಗೌಡರು, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಂಬಂಧಿಸಿದ ಅಧಿಕಾರಿಗೆ ಸ್ಥಳದಲ್ಲಿಯೇ ದೂರವಾಣಿ ಕರೆ ಮಾಡಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ತಾಕಿತು ಮಾಡಿದರು.ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ:

ತಾರನಾಳ ಕೆರೆಗೆ ನೀರು ಹರಿಸುವಂತೆ ರೈತರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ರೈತರು 10 ಎಚ್‌ಪಿ ಪಂಪ್‌ಗಳ ಮೂಲಕ ಜಮೀನುಗಳಿಗೆ ನೀರು ಹಾಯಿಸುತ್ತಿರುವುದು ಕಂಡುಬಂದಿದೆ. ರೈತರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ತಮ್ಮ ವಿರುದ್ಧ ಮಾಜಿ ಶಾಸಕರು ಟೀಕೆ ಮಾಡಿದ್ದಾರೆ ಎಂದು ನಾಡಗೌಡ ಹೇಳಿದರು.ಯಾವುದೇ ಸರ್ಕಾರ ರೈತರ ವಿರೋಧಿಯಾಗಲು ಸಾಧ್ಯವಿಲ್ಲ. ನಾನು ರೈತರಿಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎಂದು ಈ ಕಾರ್ಯಕ್ರಮದಲ್ಲಿ ಶಪಥ ಮಾಡುತ್ತೇನೆ ಎಂದು ವಾಗ್ದಾನ್‌ ಮಾಡಿದರು.ಸ್ಥಳದಲ್ಲೇ ಪರಿಹಾರಕ್ಕೆ ಆದೇಶ:

ಜನಸೇವಾ ಆಂದೋಲನದಲ್ಲಿ ನಾಲತವಾಡ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಜನರು ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು. ಸಂಧ್ಯಾ ಸುರಕ್ಷಾ ಯೋಜನೆಯ ಹಲವು ಫಲಾನುಭವಿಗಳಿಗೆ ಪಿಂಚಣಿ ಸ್ಥಗಿತಗೊಂಡಿರುವ ಕುರಿತು ಮನವಿ ಸಲ್ಲಿಸಲಾಯಿತು. ಕೆಲ ಫಲಾನುಭವಿಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿ ಶಾಸಕರು ಆದೇಶ ಪತ್ರ ವಿತರಿಸಿದರು.

ತಹಸೀಲ್ದಾರ್ ಎ.ಡಿ.ಅಮರಾವದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಂ.ಬೆಳಗಲ್ ನಿರೂಪಿಸಿದರು.ಈ ವೇಳೆ ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಾ ಗೊರಬಾಳ, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸಿಪಿಐ ಫಸಿವುದ್ದಿನ್, ಮುಖಂಡರಾದ ನಾನಾಸಾಹೇಬ್‌ ದೇಶಮುಖ, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಎ.ಜಿ.ಗಂಗನಗೌಡರ, ಶಿವಪ್ಪ ತಾತರೆಡ್ಡಿ, ಪಟ್ಟಣ ಪಂಚಾಯತಿ ಸದಸ್ಯರಾದ ಶರಣಬಸ್ಸು ಗಂಗನಗೌಡರ, ಅಮರೇಶ ಸೀರಿ, ರಮೇಶ ಆಲಕೊಪ್ಪರ, ಬಾಬು ಕ್ಷತ್ರಿ, ತಾಪಂ ಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.