ಯುವಕರ ಬದುಕಿಗೆ ವ್ಯಕ್ತಿತ್ವ ವಿಕಸನ ಮಹತ್ವದ್ದು

| Published : Mar 19 2025, 12:30 AM IST

ಯುವಕರ ಬದುಕಿಗೆ ವ್ಯಕ್ತಿತ್ವ ವಿಕಸನ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರ ಬದುಕನ್ನು ರೂಪಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ಮಹತ್ವದ ಪಾತ್ರ ವಹಿಸುತ್ತದೆ

ಕಾರವಾರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರ ಬದುಕನ್ನು ರೂಪಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ಮಹತ್ವದ ಪಾತ್ರ ವಹಿಸುತ್ತದೆ ಎಂದು ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಹೇಳಿದರು.

ತಾಲೂಕಿನ ಉಳಗಾದ ಮಹಾಸತಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಎನ್‌ಎಸ್‌ಎಸ್ ನಂತಹ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ ಸ್ವಾಸ್ಥ್ಯ ಹೆಚ್ಚಿಸುವುದರ ಜತೆಗೆ ಸೇವಾ ಮನೋಭಾವ, ಸಾಮಾಜಿಕ ಪ್ರಜ್ಞೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಯುವ ಜನತೆ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ಕ್ರೀಡೆ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ವಿ.ಪಿ.ನಾಯ್ಕ, ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಪರಿಸರ ಜಾಗೃತಿಯ ಕಾರ್ಯದಲ್ಲಿ ನಮ್ಮ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಎನ್‌ಎಸ್‌ಎಸ್ ಘಟಕಕ್ಕೆ ೫೦ ತಾಟು ಹಾಗೂ ಇತರ ಸಾಮಗ್ರಿಗಳನ್ನು ಗ್ರಾಪಂ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ನನ್ನ ಭಾರತಕ್ಕಾಗಿ ಯುವ ಜನತೆ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಶಿಬಿರ ೭ ದಿನಗಳ ಕಾಲ ನಡೆಯಲಿದೆ. ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನೀಲದತ್ತ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗ್ರಾಪಂ ಅಧ್ಯಕ್ಷೆ ಸುಧಾ ನಾಯ್ಕ, ಘಾಡಸಾಯಿ ಗ್ರಾಪಂ ಸದಸ್ಯೆ ಸುವರ್ಣ ಮಾಜಾಳಿಕರ, ಮಹಾವಿದ್ಯಾಲಯದ ಪ್ರಾಚಾರ್ಯ ವಿನೋದ ನಾಯ್ಕ, ಉಪನ್ಯಾಸಕ ರಾಘವೇಂದ್ರ ನಾಯ್ಕ, ಉಪನ್ಯಾಸಕಿ ರೂಪಾ ಕುಡ್ತರಕರ ಇದ್ದರು.