ಸಾರಾಂಶ
ಎಸ್‌ಟಿ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಇನ್ ಸೈಟ್ಸ್ ಸಂಸ್ಥಾಪಕ ಜಿ.ಬಿ.ವಿನಯ್ ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಕ್ತಿತ್ವ ವಿಕಸನವೂ ಅಷ್ಟೇ ಮುಖ್ಯವಾಗಿದ್ದು, ಬೆಳೆಯಲು ಅವಕಾಶವಿದ್ದ ಕಡೆ ಮಾತ್ರ ಬೆಳೆಯಲು ಸಾಧ್ಯ ಎಂದು ಬೆಂಗಳೂರಿನ ಇನ್ ಸೈಟ್ಸ್ ಐಎಎಸ್-ಐಪಿಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ ಎಸ್‌ಟಿ ಸಮುದಾಯದ ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಉನ್ನತ ಹುದ್ದೆ ಆಕಾಂಕ್ಷಿ ಅಭ್ಯರ್ಥಿಗಳು, ವಿದ್ಯಾರ್ಥಿಗಳು ನಿತ್ಯ ದಿನಪತ್ರಿಕೆ ಓದುವ, ಉತ್ತಮ ಕಾಲೇಜುಗಳ ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಕೇವಲ ಪುಸ್ತಕದ ಬದನೆಕಾಯಿಯಿಂದ ಐಎಎಸ್, ಐಪಿಎಸ್ ಮಾಡಲಾಗದು. ಬದಲಾಗಿ ಆತ್ಮವಿಶ್ವಾಸ, ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಯೋಚನೆ ಬೆಳೆಸಿಕೊಂಡರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.ವಿದ್ಯಾರ್ಥಿಗಳು ದೊಡ್ಡ ಕನಸುಗಳ ಕಾಣಬೇಕು. ಆ ಕನಸು ಸಾಕಾರಗೊಳ್ಳಲು ಶ್ರಮ, ಶ್ರದ್ಧೆಯನ್ನೂ ಮೈಗೂಡಿಸಿಕೊಳ್ಳಬೇಕು. ವಿಪರ್ಯಾಸವೆಂದರೆ ಇಂದು ಕನಸು ಕಾಣಲು ಜನರು ಹೆದರುವ ವಾತಾವರಣವಿದೆ. ಇದೆಲ್ಲದಕ್ಕೂ ಭಯಪಡದೇ, ನಿಮ್ಮ ಕನಸು, ಗುರಿ ನನಸಾಗಿಸಿಕೊಳ್ಳುವತ್ತ ನಿಮ್ಮ ಗಮನ ಕೇಂದ್ರೀಕರಿಸಬೇಕು. ನಮ್ಮ ಸಮಾಜ, ಕುಟುಂಬ ಯಾಕೆ ಹಿಂದುಳಿದಿದೆಯೆಂಬ ಬಗ್ಗೆ ಸ್ವಯಂ ಜಾಗೃತಿ ಮೂಡಬೇಕು. ಆಗ ಮಾತ್ರ ಸ್ವಯಂ ಬೆಳವಣಿಗೆ ಜತೆಗೆ ಸಮಾಜ ಬದಲಿಸಬಹುದು ಎಂದು ವಿನಯಕುಮಾರ ತಿಳಿಸಿದರು.
ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ ಮಾತನಾಡಿ, ಪರಿಶ್ರಮವನ್ನು ವ್ಯವಸ್ಥಿತವಾಗಿ ಬಳಸಿದಾಗ ಮಾತ್ರ ಗುರಿ ತಲುಪಲು ಸುಲಭ. ವಿದ್ಯಾರ್ಥಿಗಳಿಗೆ ಪಾಲಕರು, ಶಿಕ್ಷಕರು ಬೆನ್ನೆಲುಬಾಗಿ ನಿಂತು, ಸಹಕಾರ ನೀಡಿ ಮುನ್ನಡೆಸಬೇಕು. ಶಿಕ್ಷಕರು ಶೈಕ್ಷಣಿಕ ವ್ಯವಸ್ಥೆ ಸರಿ ಮಾಡಿಕೊಟ್ಟರೆ, ವಿದ್ಯಾರ್ಥಿಗಳು ಬೆಳವಣಿಗೆ ಹೊಂದುತ್ತಾರೆ. ಪರಿಶಿಷ್ಟರಲ್ಲಿ ಈಚೆಗೆ ಶಿಕ್ಷಣಗ ಜಾಗೃತಿ ಮೂಡಿರುವುದು ಉತ್ತಮ ಬೆಳವಣಿಗೆ ಎಂದರು.ಸಂಘದ ಅಧ್ಯಕ್ಷ ಕೆ.ಸಿ.ಶ್ರೀನಿವಾಸ ಮೂರ್ತಿ ಮಾತನಾಡಿ, ನಮ್ಮದು ಅತ್ಯಂತ ತಳ ಸಮುದಾಯ. ಮಕ್ಕಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಇನ್ನೂ ಹಿಂದುಳಿದಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ, ಜಾಗೃತರಾಗದಿದ್ದರೆ ಮಕ್ಕಳು ಹಿಂದುಳಿಯುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಎ.ಎಲ್.ನಾಗವೇಣಿ, ಪ್ರಗತಿಪರ ರೈತ ನಾಗೇಂದ್ರಪ್ಪ, ಶಂಕರ್, ಗುಮ್ಮನೂರು ಚನ್ನಬಸಪ್ಪ, ಬಸವರಾಜಪ್ಪ, ಶ್ರೀನಿವಾಸ ಹರಿಹರ, ಸಿದ್ದಪ್ಪ, ಕರೂರು ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ, ಉದ್ಯಮಿ ಕರೂರು ಹನುಮಂತಪ್ಪ, ಕೆ.ಎಂ.ಪ್ರಕಾಶ ಗುಮ್ಮನೂರು ಇತರರಿದ್ದರು. ಧೃತಿಗೆಡದೇ ಮುನ್ನುಗ್ಗಿರಾಜಕೀಯವಾಗಿ ಒಬ್ಬ ಯುವಕ ಮುಂದೆ ಬರಲು ಬಿಡುವುದಿಲ್ಲ. ಆತ ಎಲ್ಲಿ ಬೆಳೆದು ಬಿಡುತ್ತಾನೋ ಎಂಬ ಭಯವೋ ಅಥವಾ ಅಭದ್ರತೆಯೋ ಗೊತ್ತಿಲ್ಲ. ದೇಶದಲ್ಲಿ ಇಂತಹ ಜನರ ನಾವು ಕಾಣಬಹುದು. ಈಚೆಗಂತೂ ಕನಸು ಕಾಣುವುದಕ್ಕೂ ಭಯಪಡುವಂತಾಗಿದೆ. ಆದರೆ, ಯಾವುದಕ್ಕೂ ಧೃತಿಗೆಡದೇ ನಾವು ಮುನ್ನುಗ್ಗಬೇಕಿದೆ.
ಜಿ.ಬಿ.ವಿನಯಕುಮಾರ, ಸಂಸ್ಥಾಪಕ, ಇನ್‌ಸೈಟ್ಸ್ ತರಬೇತಿ ಕೇಂದ್ರ, 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿಇನ್ಸೈಟ್ ಅಂದರೆ ಒಳದೃಷ್ಟಿಯೆಂದರ್ಥ, ಕೇವಲ 40 ವಿದ್ಯಾರ್ಥಿಗಳಿಂದ ಹುಟ್ಟುಹಾಕಿದ ಸಂಸ್ಥೆ ದೇಶದ 9 ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾ ರ್ಥಿಗಳಿಗೆ ಆಸರೆಯಾಗಿದೆ. ಜಮ್ಮು ಕಾಶ್ಮೀರದ ಶ್ರೀನಗರದಿಂದ ಬೆಂಗಳೂರುವರೆಗೂ ನಮ್ಮ ಸಂಸ್ಥೆ ಇದೆ 9 ವರ್ಷದಲ್ಲಿ 1200ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳ ನೀಡಿದ ಸಂಸ್ಥೆ ತಮ್ಮದು. ಈಗ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವೆ ಎಂದು ಇನ್‌ಸೈಟ್ಸ್ ಅಕಾಡೆಮಿಯ ಜಿ.ಬಿ.ವಿನಯಕುಮಾರ ಹೇಳಿದರು.