ಸಾರಾಂಶ
- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎನ್.ಎಸ್.ಎಸ್.ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ತಿಳಿಸಿದರು.
ಗುರುವಾರ ಅಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 7 ದಿನಗಳ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಎನ್.ಎಸ್.ಎಸ್.ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮಸ್ಥರೊಂದಿಗೆ ಬೆರೆಯುವುದರಿಂದ ಗ್ರಾಮೀಣ ಭಾಗದ ಕಷ್ಟ ಸುಖಗಳು ಅರಿವಿಗೆ ಬರುತ್ತದೆ. ಪ್ರತಿ ದಿನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಜ್ಞಾನಾರ್ಜನೆಗೆ ಸಹಾಯವಾಯಿತು ಎಂದರು.ಅತಿಥಿಯಾಗಿದ್ದ ಅಳೇಹಳ್ಳಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಾಥ್ ಮಾತನಾಡಿ, ಎನ್.ಎಸ್.ಎಸ್.ಶಿಬಿರದಿಂದ ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರಿಗೆ ಹಾಗೂ ಪೋಷಕರಿಗೂ ಹೊಸ ಚೈತನ್ಯ ಉಂಟಾಗಿದೆ. ಪ್ರಸ್ತುತ ಖಾಸಗಿ ಶಾಲೆ ವ್ಯಾಮೋಹದಿಂದ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ ಬಂದಿದೆ. ಖಾಸಗಿ ಶಾಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವುದಿಲ್ಲ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸ್ಥಳೀಯ ಮುಖಂಡ ಹಾಗೂ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಮಾತನಾಡಿ, ನಮ್ಮೂರಿನ ಶಾಲೆಯಲ್ಲಿ ಎನ್.ಎಸ್.ಎಸ್.ಶಿಬಿರ ನಡೆದಿದೆ ಎಂಬುದು ನಮ್ಮೂರಿಗೆ ಹೆಮ್ಮೆ. ಪಟ್ಟಣ ವ್ಯಾಪ್ತಿಯಿಂದ ಬಂದ ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಗ್ರಾಮೀಣ ಭಾಗದ ಸೊಗಡಿನ ಪರಿಚಯವಾಗಿದೆ ಎಂದರು.ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಮಾತನಾಡಿ,1969 ರಲ್ಲಿ ಮಹಾತ್ಮಾ ಗಾಂಧೀಜಿ ನೆನಪಿನಲ್ಲಿ ರಾಷ್ಟೀಯ ಸೇವಾ ಯೋಜನೆ ಕಲ್ಪನೆ ಹುಟ್ಟಿಕೊಂಡಿದೆ. ಪ್ರತಿಯೊಬ್ಬರೂ ನಾನು ಎಂಬುದನ್ನು ಬಿಟ್ಟು ನಾವು ಎಂಬ ತತ್ವದಡಿ ದೇಶ ಸೇವೆಗೆ ಸಿದ್ದ ಎಂಬುದನ್ನು ಎನ್.ಎಸ್.ಎಸ್.ತೋರಿಸಿಕೊಟ್ಟಿದೆ. 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಹೊಸ ಅನುಭವ ವಾಗಿದ್ದು ಮುಂದೆ 70 ವರ್ಷದವರೆಗೂ ನೀವು ಮರೆಯುವುದಿಲ್ಲ ಎಂದರು.
ಸಭೆಯ ಅಧ್ಯಕ್ಷತೆಯನ್ನು ಅಳೇಹಳ್ಳಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ವಹಿಸಿದ್ದರು. ಅತಿಥಿ ಗಳಾಗಿ ಅಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್.ಕೆ.ಕೆಂಚಪ್ಪ, ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ಗೌಡ್ರು,ಗಣಪತಿ ಸೇವಾ ಸಮಿತಿ ಅಧ್ಯಕ್ಷ ವಿಜಯಕುಮಾರ್, ಮುಖಂಡ ಹೆಗಲವಾನಿ ಗಜೇಂದ್ರ,ಅರಣ್ಯ ರಕ್ಷಕ ಭೀಮಪ್ಪ ಜಗದಾಳ್, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಂ.ಎಚ್.ವಿಶ್ವನಾಥ್,ಸಹಾಯಕ ಕಾರ್ಯಕ್ರಮಾಧಿಕಾರಿ ಡಾ.ಮೇರಿ ಎಂ.ಜೆ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಎನ್.ಎಸ್.ಎಸ್. ಶಿಬಿರಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.