ಕನ್ನಡಪ್ರಭ ವಾರ್ತೆ ಕಾಗವಾಡ ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಸಂಪತ್ತಿಗಿಂತ ಸತ್ಯ ಮುಖ್ಯ. ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತರೆ ಸಮೃದ್ಧ ದೇಶ ನಿರ್ಮಾಣವಾಗಲು ಸಾಧ್ಯ. ಆ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಸಂಪತ್ತಿಗಿಂತ ಸತ್ಯ ಮುಖ್ಯ. ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತರೆ ಸಮೃದ್ಧ ದೇಶ ನಿರ್ಮಾಣವಾಗಲು ಸಾಧ್ಯ. ಆ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾಗವಾಡ ತಾಲೂಕಿನ ಸುಕ್ಷೇತ್ರ ಉಗಾರ ಬುದ್ರುಕ್ ಗ್ರಾಮದ ಪದ್ಮಾವತಿ ದೇವಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ, ಭೋಜನ ಶಾಲೆ, ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡಿದರು. ಪಾಲಕರು ಮಕ್ಕಳಿಗೆ ಯಾವುದೇ ಭಾಷೆಯ ಶಿಕ್ಷಣ ಕೊಡಿಸಿದರೂ ಜೈನ ಧರ್ಮದ ಆಚಾರ, ವಿಚಾರಗಳನ್ನು ಮಕ್ಕಳಿಗೆ ಬೋಧಿಸುವ ಜೊತೆಗೆ ತಾವೂ ಅಹಿಂಸಾ ಪರಮೋಧರ್ಮದ ತತ್ವಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಿರಿ, ಯಾರ ಬಳಿ ಭಕ್ತಿ ಇದೇಯೋ ಅಲ್ಲಿ ಶಕ್ತಿ ಇದೆ ಎಂದರು. ಜಗದುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಯುಕ್ತಿ, ಸಂಪಾದಿಸಿದರೆ ಪದ್ಮಾವತಿ ದೇವಿ ತಮಗೆ ಖಂಡಿತವಾಗಿ ಒಲಿದು ಕಷ್ಟಗಳನ್ನು ದೂರ ಮಾಡುತ್ತಾಳೆ ಎಂದು ತಿಳಿಸಿದರು.ರಾಜಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ದಿ ಹೊಂದಿರುವ ಉಗಾರ ಶ್ರೀ ಪದ್ಮಾವತಿ ದೇವಿಯ ದೇವಸ್ಥಾನ ಜಾಗೃತ ದೇವಸ್ಥಾನವಾಗಿದೆ. ಇಲ್ಲಿ ಬಂದು ಹೋಗುವ ಶ್ರಾವಕ, ಶ್ರಾವಕಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಾತ್ರಿ ನಿವಾಸ, ಭವನ ನಿರ್ಮಿಸಿರುವ ಧರ್ಮದರ್ಶಿ ಶೀತಲಗೌಡ ಪಾಟೀಲರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ, ತಾಯಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಹಾರೈಸುತ್ತೇನೆ ಎಂದರು.ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಸೌಂದಾಮ ಹುಮಚಾ ಮಠಗಳ ವಾತಾವರಣ ಈಗ ಉಗಾರ ಪದ್ಮಾವತಿ ಮಂದಿರಲ್ಲಿ ನಿರ್ಮಾಣವಾಗಿದೆ. ಧಾರ್ಮಿಕ ಕಾರ್ಯದಲ್ಲಿ ಹೆಸರು ಉಳಿಯಬೇಕಾದರೆ ಕೆ.ಎ.ವನಜೋಳ ಅವರ ಹಾಗೆ ಧರ್ಮ ಕಾರ್ಯದಲ್ಲಿ ಕೈ ಜೋಡಿಸಬೇಕಾಗುತ್ತದೆ. ನಾನು ಮತ್ತು ಶಾಸಕ ಅಭಯ ಪಾಟೀಲರು ಧರ್ಮದ ಕೆಲಸಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು.ದೇವಸ್ಥಾನದ ಧರ್ಮದರ್ಶಿ ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಮಾಜಿ ಶಾಸಕರಾದ ಕಲ್ಲಪ್ಪ ಮಗೆಣ್ಣವರ, ಮೋಹನರಾವ್ ಶಹಾ, ಸಂಜಯ ಪಾಟೀಲ, ಮಹಾವೀರ ನಿಲಜಗಿ, ಡಾ.ಮಹಾವೀರ ದಾನಿಗೊಂಡ, ಬಾಹುಬಲಿ ನಾಗನೂರಿ, ಸುನೀಲ ಪಾಟೀಲ, ಮಹಾವೀರ ಕಾತ್ರಾಳೆ, ಸಂಜಯ ನಾಡಗೌಡ, ಅಭಯಕುಮಾರ ಅಕಿವಾಟೆ, ಅಶೋಕ ಚೌಗುಲೆ, ಕಲ್ಲಪ್ಪ ವನಜೋಳ, ಎಂ.ಎಚ್.ನಂದಗಾಂವ, ಸಂಜಯ ಕುಚನೂರೆ, ಮಹೇಂದ್ರ ಖೇಮಲಾಪೂರೆ, ಡಾ,ನೀರಜಾ ನಾಗೇಂದ್ರಕುಮಾರ, ಬಮ್ಮಣ್ಣ ಚೌಗಲೆ, ವರ್ಧಮಾನ ಕೋರಿ, ಪ್ರದೀಪ ಚಿಂಚವಾಡೆ,ಆದಿನಾಥ ವಸವಾಡೆ ಉಪಸ್ಥಿತರಿದ್ದರು. ಈ ವೇಳೆ ಮಹಾದಾನಿಗಳನ್ನು ಸನ್ಮಾನಿಸಲಾಯಿತು.ವಜ್ರಕುಮಾರ ಮಗದುಮ್ ಸ್ವಾಗತಿಸಿ, ವಂದಿಸಿದರು.