ಪಿಇಎಸ್‌ ಟ್ಯಾಮ್ಸ್‌ ಸ್ಪರ್ಧೆ ಯಶಸ್ವಿ:9 ರಾಜ್ಯಗಳ 5900 ಮಕ್ಕಳು ಭಾಗಿ

| Published : Aug 24 2025, 02:00 AM IST

ಪಿಇಎಸ್‌ ಟ್ಯಾಮ್ಸ್‌ ಸ್ಪರ್ಧೆ ಯಶಸ್ವಿ:9 ರಾಜ್ಯಗಳ 5900 ಮಕ್ಕಳು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪಿಇಎಸ್‌ ವಿಶ್ವವಿದ್ಯಾಲಯ ಶನಿವಾರ ಹೊಸಕೆರೆಹಳ್ಳಿಯ ರಿಂಗ್‌ ರಸ್ತೆ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ‘ದಿ ಅಮೆಚೂರ್‌ ಮ್ಯಾನೇಜರ್‌ ಆ್ಯಂಡ್‌ ಸೈನ್ಟಿಸ್ಟ್‌ (ಟ್ಯಾಮ್ಸ್‌)-2025’ ರಾಷ್ಟ್ರೀಯ ಸ್ಪರ್ಧಾ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ನಗರದ ಪಿಇಎಸ್‌ ವಿಶ್ವವಿದ್ಯಾಲಯ ಶನಿವಾರ ಹೊಸಕೆರೆಹಳ್ಳಿಯ ರಿಂಗ್‌ ರಸ್ತೆ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ‘ದಿ ಅಮೆಚೂರ್‌ ಮ್ಯಾನೇಜರ್‌ ಆ್ಯಂಡ್‌ ಸೈನ್ಟಿಸ್ಟ್‌ (ಟ್ಯಾಮ್ಸ್‌)-2025’ ರಾಷ್ಟ್ರೀಯ ಸ್ಪರ್ಧಾ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು.

ವೈಜ್ಞಾನಿಕ ಮನೋಭಾವ ಮತ್ತು ನಿರ್ವಹಣಾ ಕೌಶಲ್ಯವನ್ನು ಪ್ರೇರೇಪಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಒಂಬತ್ತು ರಾಜ್ಯಗಳ 376 ಶಾಲೆಗಳ 8ರಿಂದ 12ನೇ ತರಗತಿವರೆಗಿನ 5900 ವಿದ್ಯಾರ್ಥಿಗಳು ಸುಮಾರು 17 ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಅಂತಿಮವಾಗಿ ಬೆಂಗಳೂರಿನ ನಂದಿನಿ ಲೇಔಟ್‌ನ ಪ್ರೆಸಿಡೆನ್ಸಿ ಶಾಲೆ ವಿದ್ಯಾರ್ಥಿಗಳು ‘ಸಮಗ್ರ ವಿಜೇತ’ ಪ್ರಶಸ್ತಿಗೆ ಪಾತ್ರವಾದರು. ಎಸ್‌ಜೆ ಪಿಯುಸಿ ಕಾಲೇಜಿನ ತಂಡವು ರನ್ನರ್‌-ಅಪ್ ಸ್ಥಾನ ಪಡೆದುಕೊಂಡಿತು. 12ನೇ ಆವೃತ್ತಿಯ ಈ ಸ್ಪರ್ಧಾ ಕಾರ್ಯಕ್ರಮ ಯುವ ಆವಿಷ್ಕಾರಕರಿಗೆ ಪ್ರಮುಖ ರಾಷ್ಟ್ರೀಯ ವೇದಿಕೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ವಿವಿ ಆವರಣವು ದಿನವಿಡೀ ಚಟುವಟಿಕೆಗಳ ಕೇಂದ್ರವಾಗಿತ್ತು. ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ, ವ್ಯೂಹಾತ್ಮಕ, ಸೃಜನಾತ್ಮಕ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪರೀಕ್ಷಿಸಲು 17 ವಿಶಿಷ್ಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನ, ವ್ಯವಹಾರ ಕ್ಷೇತ್ರದ ಆವಿಷ್ಕಾರ, ಚಿಂತನಾ ಸಾಮರ್ಥ್ಯ, ತಂಡ ಸ್ಫೂರ್ತಿ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಸಹಕಾರಿಯಾದವು.

ಕಾರ್ಯಕ್ರಮವನ್ನು ಪಿಇಎಸ್ ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರೊ. ಅಜೋಯ್ ಕುಮಾರ್‌, ಕುಲಪತಿ ಡಾ. ಸೂರ್ಯಪ್ರಸಾದ್ ಮತ್ತು ಮ್ಯಾನೇಜ್‌ಮೆಂಟ್‌ ಸ್ಟಡೀಸ್ ವಿಭಾಗದ ಡೀನ್ ಡಾ. ಶೈಲಶ್ರೀ ಹರಿದಾಸ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಯುವ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನಾ ಪ್ರವೃತ್ತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಯುವಕರಿಗೆ ಪಿಇಎಸ್ ವಿವಿ

ಸ್ಫೂರ್ತಿ ತುಂಬುವ ಕೆಲಸ

ಈ ಬಾರಿಯ ‘ಟ್ಯಾಮ್ಸ್’ ಸ್ಪರ್ಧೆಯು ಅಭೂತಪೂರ್ವ ಯಶಸ್ಸು ಕಂಡಿದೆ. 9 ರಾಜ್ಯಗಳ 5900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ವಿಜ್ಞಾನ ಮತ್ತು ನಿರ್ವಹಣೆಯ ಸಮ್ಮಿಲನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ತನ್ನ ಪರಂಪರೆಯನ್ನು ಈ ಕಾರ್ಯಕ್ರಮ ಮುಂದುವರಿಸಿದೆ. ಮುಂದಿನ ಪೀಳಿಗೆಯ ನಾಯಕರನ್ನು ಮತ್ತು ಆವಿಷ್ಕಾರಕರನ್ನು ಪೋಷಿಸುವ ತನ್ನ ಮೂಲ ಧ್ಯೇಯಕ್ಕೆ ಇದು ಬದ್ಧವಾಗಿದೆ. ಯುವ ಮನಸ್ಸುಗಳಿಗೆ ಸ್ಫೂರ್ತಿ ತುಂಬುವ ತನ್ನ ಧ್ಯೇಯವನ್ನು ಪಿಇಎಸ್ ವಿಶ್ವವಿದ್ಯಾಲಯವು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ ಎಂದು ಗಣ್ಯರು ತಿಳಿಸಿದರು.