ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಮುಸುಕಿನ ಜೋಳದ ಫಸಲು ಹಾನಿಯಾಗಿದೆ.ಹನೂರು ತಾಲೂಕಿನ ವ್ಯಾಪ್ತಿಯ ಹೂಗ್ಯಂ ಗ್ರಾಮದ ರೈತ ಮಹಿಳೆ ಕುಪ್ಪಮ್ಮ ಅವರ ಸರ್ವೆ ನಂ 507ರಲ್ಲಿ ನಾಲ್ಕು ಎಕರೆ ಜಮೀನಿನ ಎರಡು ಎಕರೆ ಮುಸುಕಿನ ಜೋಳ ಫಸಲನ್ನು ಹಂದಿಗಳು ನಿತ್ಯ ರಾತ್ರಿ ವೇಳೆ ಜಮೀನಿಗೆ ಬಂದು ಮುಸುಕಿನ ಜೋಳದ ಫಸಲು ತಿಂದು ಹಾಳು ಮಾಡುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತ ಸಂಪತ್ ಅಳಲು ತೋಡಿಕೊಂಡರು.
ಕಾಡುಪ್ರಾಣಿಗಳ ಉಪಟಳದಿಂದ ಬೆಳೆ ಹಾನಿ:ಕಷ್ಟಪಟ್ಟು ಸಾಲ ಮಾಡಿ ಜಮೀನಿನಲ್ಲಿ ಉಳುಮೆ ಮಾಡಿ ಗೊಬ್ಬರ ಹಾಕಿ ಮುಸುಕಿನ ಜೋಳವನ್ನು ನೀರಾವರಿಗೆ ಹಾಕಲಾಗಿದೆ. ಆದರೆ ನಿತ್ಯ ನೂರಾರು ಹಂದಿಗಳು ಬಂದು ಜಮೀನಿಗೆ ನುಗ್ಗಿ ಫಸಲನ್ನು ತಿಂದು ತುಳಿದು ನಾಶಗೊಳಿಸಿ, ನಷ್ಟ ಉಂಟು ಮಾಡಿವೆ. ಸೋಲಾರ್ ಬೇಲಿ ಇದ್ದರೂ ಲೆಕ್ಕಿಸದೆ ಕಾಡುಪ್ರಾಣಿಗಳು ಜಮೀನಿಗೆ ನುಗ್ಗಿ ಲಕ್ಷಾಂತರ ರುಪಾಯಿ ಬೆಲೆಯ ಫಸಲನ್ನು ನಾಶಗೊಳಿಸಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪರಿಹಾರಕ್ಕೆ ಒತ್ತಾಯ:ಮಲೆ ಮಹದೇಶ್ವರ ವನ್ಯಧಾಮ ಪ್ರದೇಶದಿಂದ ಬರುತ್ತಿರುವ ಹಂದಿಗಳನ್ನು ಅರಣ್ಯ ಅಧಿಕಾರಿಗಳು ನಿಯಂತ್ರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಜಮೀನಿನಲ್ಲಿ ನಷ್ಟ ಉಂಟಾಗಿರುವ ಅಂದಾಜು ಪಟ್ಟಿ ತಯಾರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.