ಹು-ಧಾ ಮಹಾನಗರ ಪಾಲಿಕೆ ಆರಂಭಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರುವುದರೊಳಗೆ ಉತ್ಸಾಹ ಕಳೆದುಕೊಂಡು ಹಾಳಾಗುವುದೇ ಹೆಚ್ಚು. ಇಂತಹ ಯೋಜನೆಗಳ ಸಾಲಿನಲ್ಲೀಗ ಸಾಕು ಪ್ರಾಣಿಗಳ ಚಿತಾಗಾರ ನಿಂತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆರಂಭಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರುವುದರೊಳಗೆ ಉತ್ಸಾಹ ಕಳೆದುಕೊಂಡು ಹಾಳಾಗುವುದೇ ಹೆಚ್ಚು. ಇಂತಹ ಯೋಜನೆಗಳ ಸಾಲಿನಲ್ಲೀಗ ಸಾಕು ಪ್ರಾಣಿಗಳ ಚಿತಾಗಾರ ನಿಂತಿದೆ!

ಎರಡು ವರ್ಷದ ಹಿಂದೆ ಸಿದ್ಧಗೊಂಡು ಕಾರ್ಯಚಟುವಟಿಕೆ ಆರಂಭಿಸಬೇಕಿದ್ದ "ಸಾಕು ಪ್ರಾಣಿಗಳ ಚಿತಾಗಾರ " ಬಂದ್‌ ಆಗಿದೆ. ಚಿತಾಗಾರದಲ್ಲಿ ಅಳವಡಿಸಿರುವ ಯಂತ್ರಗಳೆಲ್ಲ ಬಳಕೆಯಾಗದೇ ತುಕ್ಕು ಹಿಡಿದು ಹಾಳಾಗಿ ಹೋಗುತ್ತಿವೆ.

ರಾಜ್ಯದಲ್ಲೇ ಮೊದಲ ಘಟಕ

ರಾಜ್ಯದಲ್ಲಿ ಮೊದಲ ಬಾರಿಗೆ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯ ಅನುದಾನದಡಿ 2024ರಲ್ಲಿಯೇ ₹1.6 ಕೋಟಿ ವೆಚ್ಚದಲ್ಲಿ ಇಲ್ಲಿನ ಕಾರವಾರ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಧಾರವಾಡದ ಹೊಸಯಲ್ಲಾಪುರ ಬಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಾಕುಪ್ರಾಣಿಗಳ ಚಿತಾಗಾರ ಘಟಕ ನಿರ್ಮಿಸಲಾಗಿದೆ.

ಕೆಲವು ಕಡೆಗಳಲ್ಲಿ ಬೀದಿಗಳಲ್ಲಿ ಪ್ರಾಣಿಗಳು ಅಪಘಾತ, ಇನ್ನಿತರ ರೋಗಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡು, ರಸ್ತೆಗಳಲ್ಲಿಯೇ ಎಲ್ಲೆಂದರಲ್ಲಿ ಬೀಳುತ್ತಿದ್ದವು. ಇನ್ನು ಸಾರ್ವಜನಿಕರು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಹಿತ್ತಲಿನಲ್ಲಿ ಹೂತು ಹಾಕುವುದು ಅಥವಾ ಪಾಲಿಕೆ ವಾಹನಗಳಿಗೆ ಹಸ್ತಾಂತರಿಸುತ್ತಿದ್ದರು. ಸಾಕಷ್ಟು ಜನರು ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಾಕುಪ್ರಾಣಿಗಳ ಸ್ಮಶಾನ ಘಟಕ (ಚಿತಾಗಾರ) ಸ್ಥಾಪಿಸಲು ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಯ ಮೇರೆಗೆ ಪಾಲಿಕೆಯು 2024ರಲ್ಲಿ ಈ ಪ್ರಾಣಿಗಳನ್ನು ಸುಡುವುದಕ್ಕಾಗಿಯೇ ಪ್ರತ್ಯೇಕ ಚಿತಾಗಾರ ನಿರ್ಮಿಸಿತು. ಮೊದಲೆಲ್ಲ ಪಾಲಿಕೆಯ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆಯ ವ್ಯಕ್ತವಾಗಿತ್ತು. ಆದರೆ, ನಿರ್ಮಾಣಗೊಂಡು ಕಾರ್ಯರೂಪಕ್ಕೆ ಬಾರದಿರುವುದರಿಂದ, ಸಾರ್ವಜನಿಕರು ಪಾಲಿಕೆ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವೆಲ್ಲ ಪ್ರಾಣಿಗಳು?

ಮಹಾನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿ, ಸಾಕುನಾಯಿ, ಹಸು, ಬೆಕ್ಕು, ಹಂದಿ, ಎಮ್ಮೆ, ಆಕಳು ಸೇರಿದಂತೆ ದನಕರುಗಳು ಸತ್ತು ಬಿದ್ದಾಗ ಪಾಲಿಕೆ ಸಿಬ್ಬಂದಿ ಎತ್ತಿ ಬೇರೆ ಕಡೆ ಬಿಸಾಕಲಾಗುತ್ತಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಪ್ರಾಣಿಗಳ ಕಳೇಬರಗಳ ವಿಲೇವಾರಿಗೆ ಸಂಬಂಧಿಸಿದಂತೆ 250ಕ್ಕೂ ಹೆಚ್ಚು ದೂರು ಬರುತ್ತಿದ್ದವು. ಪಾಲಿಕೆ ಸಿಬ್ಬಂದಿ ಅವುಗಳನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡುತ್ತಿದ್ದರು. ಇನ್ನು ಕೆಲವರು ಎಲ್ಲೆಂದರಲ್ಲಿ ಕಳೇಬರ ಎಸೆದು ಹೋಗುತ್ತಿದ್ದರು. ಇದರಿಂದ ಸೂಸುವ ದುರ್ವಾಸನೆಯಿಂದಾಗಿ ರೋಗ ಹರಡುವ ಆತಂಕವೂ ಇತ್ತು. ಅದನ್ನು ತಪ್ಪಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ನಿಯಮಾವಳಿ ಅನ್ವಯ ಈ ಚಿತಾಗಾರ ನಿರ್ಮಿಸಲಾಗಿದೆ.

30 ಮೀಟರ್ ಎತ್ತರದ ಚಿಮಣಿ:

ಒಂದು ಗಂಟೆಗೆ 80-100 ಕೆಜಿ ತೂಕದ ಪ್ರಾಣಿಗಳನ್ನು ಇದರಲ್ಲಿ ದಹನ ಮಾಡುವುದರಿಂದ ದಟ್ಟ ಹೊಗೆ ಬರುತ್ತದೆ. ಹೀಗಾಗಿ 30 ಮೀಟರ್ ಎತ್ತರದ ಚಿಮಣಿ ನಿರ್ಮಿಸಲಾಗಿದೆ. ಹೊರಹೊಮ್ಮುವ ಹೊಗೆಯಿಂದ ದಹನ ಯಂತ್ರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ, ವಾಯು ಮಾಲಿನ್ಯವಾಗುವುದಿಲ್ಲ. ಎರಡು ಘಟಕಗಳಲ್ಲಿ‌ ಏರ್ ಪಿಲ್ಟರ್ಸ್ ಅಳವಡಿಸಲಾಗಿದೆ. ಸುಟ್ಟ ಭಾಗದ ಬೂದಿ‌ಮಾತ್ರ ಉಳಿದುಕೊಳ್ಳಲಿದೆ.

2 ವರ್ಷಗಳಿಂದ ಆರಂಭವಾಗದ ಘಟಕ

ಈಗಾಗಲೇ ಸಂಪೂರ್ಣವಾಗಿ ನಿರ್ಮಾಣಗೊಂಡಿರುವ ಈ ಚಿತಾಗಾರದಲ್ಲಿ ದಹನಕ್ರಿಯೆಗೆ ಗ್ಯಾಸ್‌ ಬಳಸುವ ವ್ಯವಸ್ಥೆ ಇಡಲಾಗಿದೆ. ಆದರೆ, ಈ ವರೆಗೂ ಇದಕ್ಕೆ ಗ್ಯಾಸ್‌ ಸಂಪರ್ಕ ಅಳವಡಿಸಿಲ್ಲ. ಹಾಗಾಗಿ ಇಂದಿಗೂ ಇದು ಕಾರ್ಯಾರಂಭ ಮಾಡಿಲ್ಲ. ಇದರಿಂದಾಗಿ ಅಳವಡಿಸಲಾಗಿರುವ ಯಂತ್ರಗಳೆಲ್ಲ ತುಕ್ಕು ಹಿಡಿದರೆ, ಕಿಡಿಗೇಡಿಗಳು ಇದರ ಕಿಟಕಿಗಳ ಗಾಜುಗಳೆನ್ನೆಲ್ಲ ಒಡೆದು ಹಾಕಿದ್ದಾರೆ.

ನೋವಿನ ಸಂಗತಿ

ಪಾಲಿಕೆಯ ಹಲವು ಯೋಜನೆಗಳು ಹುಮ್ಮಸ್ಸಿನಿಂದ ಆರಂಭಗೊಳ್ಳುತ್ತವೆ. ಆರಂಭಿಸಿದ ಕೆಲವೇ ದಿನಗಳಲ್ಲಿ ಉತ್ಸಾಹ ಕಳೆದುಕೊಂಡು ಕಾರ್ಯಾರಂಭ ನಿಲ್ಲಿಸುತ್ತವೆ. ಇಂತಹ ಸಾಲಿಗೆ ಈಗ ಸಾಕುಪ್ರಾಣಿಗಳ ಚಿತಾಗಾರವೂ ಸೇರಿದೆ. ಯಾವ ಉದ್ದೇಶಕ್ಕಾಗಿ ನಿರ್ಮಾಣ ಮಾಡಿದ್ದಾರೆಯೋ ಅದು ಕಾರ್ಯರೂಪಕ್ಕೆ ಬಾರದಿರುವುದು ನೋವಿನ ಸಂಗತಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಶ್ರೀನಿವಾಸ ಬೆಟಗೇರಿ.