ಪೇಟೆ ಶ್ರೀ ರಾಮ ಮಂದಿರ ಮಂಟಪ: ವೈಕುಂಠ ದರ್ಶನ ಕಥಾ ಸಾರಂಶ
KannadaprabhaNewsNetwork | Published : Oct 11 2023, 12:45 AM IST
ಪೇಟೆ ಶ್ರೀ ರಾಮ ಮಂದಿರ ಮಂಟಪ: ವೈಕುಂಠ ದರ್ಶನ ಕಥಾ ಸಾರಂಶ
ಸಾರಾಂಶ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಪೇಟೆ ಶ್ರೀ ರಾಮ ಮಂದಿರ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿಯ ಮಂಟಪದಲ್ಲಿ ವೈಕುಂಠ ದರ್ಶನ ಎಂಬ ಕಥಾಸಾರಂಶ ಅಳವಡಿಸಲಾಗುತ್ತಿದ್ದು, 8 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಮಂಟಪ ಕೆಲಸ ಭರದಿಂದ ಸಾಗಿದೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಪೇಟೆ ಶ್ರೀ ರಾಮ ಮಂದಿರ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿಯ ಮಂಟಪದಲ್ಲಿ ವೈಕುಂಠ ದರ್ಶನ ಎಂಬ ಕಥಾಸಾರಂಶ ಅಳವಡಿಸಲಾಗುತ್ತಿದ್ದು, 8 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಮಂಟಪ ಕೆಲಸ ಭರದಿಂದ ಸಾಗಿದೆ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮೊದಲು ಹೊರಡುವ ಮಂಟಪ ಕೂಡ ಇದಾಗಿದೆ. ಸಮಿತಿ 55 ಮಂದಿಯ ಸಂಖ್ಯಾ ಬಲವನ್ನು ಹೊಂದಿದೆ. ದಿಂಡಿಗಲ್‌ನ ಸೆಲ್ವಂ ಎಲೆಕ್ಟ್ರಿಕಲ್ ಲೈಟಿಂಗ್ ಬೋರ್ಡ್ ವ್ಯವಸ್ಥೆ ಮಾಡಲಿದೆ. ಮರ್ಕರ ಪವರ್ ಸ್ಟುಡಿಯೋ ಸೆಟ್ಟಿಂಗ್ಸ್ ಮತ್ತು ಸೌಂಡ್ಸ್ ನಿರ್ವಹಿಸಲಿದೆ. ಸಮಿತಿಯ ಸದಸ್ಯರು ಚಲನವಲನ ಮಾಡಲಿದ್ದಾರೆ. ಎಸ್‌ಕೆವೈಸಿ ತಂಡ ಫ್ಲಾಟ್ ಫಾರಂ ಸಿದ್ಧಪಡಿಸಲಿದೆ. ರಾಮ ಮಂದಿರ ಮಂಟಪಕ್ಕೆ ಸುಮಾರು 180ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತಿದೆ. ವಿಜಯದಶಮಿ ದಿನ ರಾತ್ರಿ 7.30ಕ್ಕೆ ಸರಿಯಾಗಿ ಶೋಭಾಯಾತ್ರೆಯ ಸಂದರ್ಭದಲ್ಲಿ ಪೇಟೆ ಶ್ರೀ ರಾಮ ಮಂದಿರ ಮಂಟಪವು ಮೊದಲು ಹೊರಡುವ ಮೂಲಕ ನಾಲ್ಕು ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗಗಳನ್ನು ಆಹ್ವಾನಿಸುತ್ತದೆ. ಆ ಮೂಲಕ ದಶ ಮಂಟಪಗಳ ಶೋಭಾಯಾತ್ರೆ ಆರಂಭಗೊಳ್ಳುತ್ತದೆ. ಈ ಮಂಟಪದಲ್ಲಿ ಯಾವುದೇ ಚಲನವಲನ ಇರುವುದಿಲ್ಲ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮಂಟಪಗಳಿಗೆ ಮಡಿಕೇರಿ ದಸರಾ ಸಮಿತಿಯಿಂದ ಪ್ರತಿ ಬಾರಿ ಪ್ರಶಸ್ತಿ ನೀಡಲಾಗುತ್ತದೆ. ಇದರಿಂದಲೇ ಒಂದೊಂದು ಮಂಟಪಗಳು ಕೂಡ ವಿಭಿನ್ನವಾಗಿರುತ್ತದೆ. ಆದರೆ ಪ್ರತಿ ಬಾರಿ ಕೂಡ ಪೇಟೆ ಶ್ರೀ ರಾಮ ಮಂದಿರ ಮಂಟಪವು ಸ್ಪರ್ಧೆ ಮಾಡುವುದಿಲ್ಲ. * ದೇವಾಲಯದ ಇತಿಹಾಸ: ಮಡಿಕೇರಿ ಪೇಟೆ ಶ್ರೀ ರಾಮ ಮಂದಿರ ದೇವಾಲಯ ಸುಮಾರು 180ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ನಿಟ್ಟಿನಲ್ಲಿ ನಗರದ ದೊಡ್ಡಪೇಟೆಯಲ್ಲಿ ನೆಲೆ ನಿಂತಿದೆ. ದೇವಾಲಯಕ್ಕೆ ಹೆಚ್ಚಾಗಿ ಮದುವೆ ಪ್ರಾಪ್ತಿಗೋಸ್ಕರ ಭಕ್ತರು ಆಗಮಿಸಿದರೆ, ಉಳಿದವರು ತಮ್ಮತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಆಗಮಿಸುತ್ತಾರೆ. ಬೇಡಿಕೆ ಈಡೇರಿದ ನಂತರ ತಾವು ನೆನೆಸಿದನ್ನು ಶ್ರೀರಾಮನಿಗೆ ಅರ್ಪಿಸುತ್ತಾರೆ. ಮಹಾಗಣಪತಿಗೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಗಣಪತಿ ಹೋಮ, ಅಷ್ಟೋತ್ತರ ಪೂಜೆ. ರಾಮನಿಗೆ ಅಷ್ಟೋತ್ತರ ಶತನಾಮಾವಳಿ ಅರ್ಚನೆ, ವಿಷ್ಣು ಸಹಸ್ರನಾಮ ಸೇವೆ, ಅಲಂಕಾರ ಸೇವೆ, ಕುಂಕುಮಾರ್ಚನೆ. ಆಂಜನೇಯನಿಗೆ ವೀಳ್ಯದೆಲೆ ಸೇವೆ ಪವಮಾನ ಅಭಿಷೇಕ. ನವಗ್ರಹ ದೇವತೆಗೆ ನವಗ್ರಹ ಜಪ, ಏಕಗ್ರಹ ಜಪ, ಗ್ರಹಶಾಂತಿ ಹೋಮ, ನವಗ್ರಹ ಪೂಜೆಗಳು ನಡೆಯುತ್ತದೆ. ಈ ಬಾರಿ ವೈಕುಂಠ ದರ್ಶನ ಎಂಬ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಮಂಟಪದಲ್ಲಿ ಹತ್ತು ಕಲಾಕೃತಿಗಳು ಇರಲಿದೆ. ಆದರೆ ಯಾವುದೇ ಚಲನವಲನ ಇರುವುದಿಲ್ಲ. ಮಂಟಪವನ್ನು 8 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕೆಲಸ ನಡೆಯುತ್ತಿದೆ. ಭರತ್ ಬಿದ್ದಪ್ಪ, ಅಧ್ಯಕ್ಷರು ಪೇಟೆ ಶ್ರೀ ರಾಮ ಮಂದಿರ ದಸರಾ ಸಮಿತಿ