ಸಾರಾಂಶ
ಕೊಪ್ಪಳ: ಹುಬ್ಬಳ್ಳಿ ವಾಯಾ ಕೊಪ್ಪಳ, ಹೊಸಪೇಟೆ ಮೂಲಕ ಬೆಂಗಳೂರಿಗೆ ಆರು ರೈಲು ಓಡಿಸುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈಲ್ವೆ ನಿಲ್ದಾಣದ ಪ್ರಬಂಧಕ ಸೈಯ್ಯದ್ ಅಸಿಫ್ ಹಾಗೂ ರೈಲ್ವೆ ಟ್ರಾಫಿಕ್ ಇನ್ಸ್ ಪೆಕ್ಟರ್ ಸಂದೀಪ್ ಸುಮನ್ ಮುಖಾಂತರ ಹುಬ್ಬಳ್ಳಿಯ ರೈಲ್ ಸೌಧದ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರ್ ಅವರಿಗೆ ರೈಲ್ವೆ ಜನಪರ ಹೋರಾಟ ಸಮಿತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕನಕದಾಸ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಹುಬ್ಬಳ್ಳಿ ಬೆಂಗಳೂರು ವಾಯಾ ಹಾವೇರಿ ಮೂಲಕ ನಿತ್ಯ ಸಂಚರಿಸುವ ಅನೇಕ ರೈಲುಗಳಲ್ಲಿ ಆರು ರೈಲುಗಳನ್ನು ಹುಬ್ಬಳ್ಳಿ ವಾಯಾ ಕೊಪ್ಪಳ - ಹೊಸಪೇಟೆ ಮೂಲಕ ಬೆಂಗಳೂರಿಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು, ಸಂಖ್ಯೆ 56519/56520 ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಹೊಸಪೇಟೆಯಿಂದ ಮುನಿರಾಬಾದ ಗಿಣಿಗೇರಾ ಕೊಪ್ಪಳ ಭಾಣಾಪುರ ತಳಕಲ್ ಜಂಕ್ಷನ್ ಮೂಲಕ ಕುಕನೂರು ಯಲಬುರ್ಗಾ ಕುಷ್ಟಗಿವರೆಗೆ ವಿಸ್ತರಿಸಬೇಕು. ಗದಗ ವಾಡಿ ಮಾರ್ಗ ಕೇವಲ ಕುಷ್ಟಗಿವರೆಗೆ ಮಾತ್ರ ಪೂರ್ಣಗೊಂಡಿದ್ದು. ವಾಡಿವರೆಗೂ ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು ( ವಾಯಾ ಗದಗ, ಕೊಪ್ಪಳ,ಹೊಸಪೇಟೆ ಬಳ್ಳಾರಿ, ಗುಂತಕಲ್ , ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ. ಕಲಬುರಗಿ ). ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ ರೈಲು ಪ್ರಾರಂಭಿಸುವುದರಿಂದ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರೈಲು ಆಗಲಿದ್ದು ಈ ಭಾಗದ ಜನರಿಗೆ ವಾಣಿಜ್ಯ ವ್ಯಾಪಾರಕ್ಕೆ ಸೇತುವೆಯಾಗುತ್ತದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ, ರೈಲ್ವೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್. ಗೌರವಾಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು, ಹಿರಿಯ ಸಲಹೆಗಾರ ಬಸವರಾಜ್ ಶೀಲವಂತರ್, ಉಪಾಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು, ಸಹ ಕಾರ್ಯದರ್ಶಿ ಶಿವಪ್ಪ ಹಡಪದ್, ಕಾರ್ಮಿಕ ಸಂಘಟನೆ ಮುಖಂಡ ಕೆ.ಬಿ. ಗೋನಾಳ, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ, ದಲಿತ ಯುವ ವೇದಿಕೆ ಸಂಚಾಲಕ ಸುಂಕಪ್ಪ ಮೀಸಿ, ಭೀಮಪ್ಪ, ಮಂಜುನಾಥ್, ದುರ್ಗಪ್ಪ, ಮುತ್ತುರಾಜ್ ಚನ್ನದಾಸರ, ಸುರೇಶ್ ಹಮ್ಮನವರ ಮುಂತಾದವರು ಪ್ರತಿಭಟನಾ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತ ತೆರಳಿ ಮನವಿ ಸಲ್ಲಿಸಿದರು.;Resize=(128,128))
;Resize=(128,128))