Social activist Basavaraj Melinamani has stated that a Public Interest Litigation (PIL) will be filed in the High Court challenging the suspension of two teachers from the taluk over allegations related to a march-past.

ಕನ್ನಡಪ್ರಭ ವಾರ್ತೆ ಹುಣಸಗಿ

ಪಥಸಂಚಲನದ ಆರೋಪದಡಿ ತಾಲೂಕಿನ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ್ ಮೇಲಿನಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹುಣಸಗಿ ತಾಲೂಕಿನ ಇಬ್ಬರು ಶಿಕ್ಷಕರು ಆರೆಸ್ಸೆಸ್‌ ಪಥಸಂಚಲನದ ಸುಳ್ಳು ಆರೋಪ ಆಧರಿಸಿ ಅಮಾನತು ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಶಕ್ತಿ ದಾವೆ ಹಾಕಲಾಗುವುದು ಎಂದಿದ್ದಾರೆ.

ಕಳೆದ ವರ್ಷ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗ್ರಾಮ ಪಂಚಾಯತಿ ಅಧಿಕಾರಿಯೊಬ್ಬರು ಆರೆಸ್ಸೆಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಅವರನ್ನು ಅಮಾನತು ಮಾಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯ ಕಾನೂನು ತಂಡವು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಈ ಕ್ರಮವನ್ನು ಪ್ರಶ್ನಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು, ರಾಜ್ಯ ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಿತ್ತು. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.‌ ಇದರ ಮಧ್ಯೆ ಸುಮಾರು ತಿಂಗಳುಗಳ ನಂತರ ಇಬ್ಬರು ಶಾಲಾ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ನೀಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸನಾತನ ಧರ್ಮ. ಮನುಸ್ಮೃತಿಗಳು, ವೇದ ಉಪನಿಷತ್ತು ರಾಮಾಯಣ ಮಹಾಭಾರತ, ಅದರೊಳಗಿನ ಭಗವದ್ಗೀತೆ. ಮುಂತಾದ ಗ್ರಂಥಗಳ ಆಧಾರದ ಮೇಲೆ ರೂಪಗೊಂಡ ಹಿಂದೂ ಜೀವನಶೈಲಿಯ ಆಶಯಗಳನ್ನು ಪ್ರತಿಪಾದಿಸುವ ಒಂದು ಶಿಸ್ತಿನ ಸಂಸ್ಥೆ ಆರೆಸ್ಸೆಸ್‌. ಆ.31 ರೊಳಗೆ ಅಮಾನತು ಆದೇಶ ಹಿಂಪಡೆಯಲು ಗಡುವು ನೀಡಲಾಗುವುದು ಎಂದು ಅವರು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.